ಶಿವರಾತ್ರಿಗಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪಾದಚಾರಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ.
ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು. ಮೃತರು ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರು. ಘಟನೆಯಲ್ಲಿ ಗಂಭೀರ ಗಾಯಗೊಂಡ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ನಗರದ ಹೊರ ವಲಯದ ಎಚ್ ಕೆಎಸ್ ಇಂಟರನ್ಯಾಷನಲ್ ಶಾಲೆ ಬಳಿ ಘಟನೆ ನಡೆದಿದ್ದು, ಆತಂಕಗೊಂಡ ಬಸ್ ಚಾಲಕ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಹಾಸನ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಬಸ್ ಜಪ್ತಿ ಮಾಡಿದ್ದಾರೆ.
ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊರಟಿದ್ದವರ ಮೇಲೆ ಅಪ್ಪಳಿಸಿದೆ. ಈ ವೇಳೆ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿಯೂ ಗಂಭೀರವಾಗಿದ್ದು ಅವರಿಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



