ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಗೋ ಸಂಸ್ಕೃತಿಯೊಂದಿಗೆ ಬೆಳೆದು ಬಂದಿದೆ. ಪಶುಪಾಲನೆ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿವೆ. ಆದರೆ ಇತ್ತೀಚೆಗೆ ಕ್ರಮೇಣವಾಗಿ ದೇಶದಲ್ಲಿ ಪಶುಪಾಲನೆ ಮತ್ತು ಕೃಷಿಯಿಂದ ಜನರು ದೂರ ಸರಿಯುತ್ತಿರುವುದು ಇಂದಿನ ನಮ್ಮ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಾವು ನಮ್ಮ ದೇಶದ ಹೆಮ್ಮೆಯ ಗೋ ಸಂಸ್ಕೃತಿಯ ಪುನರುತ್ಥಾನದ ಕಡೆಗೆ ಗಮನಹರಿಸಬೇಕು ಎಂದು ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿಯರು ಕರೆ ನೀಡಿದ್ದಾರೆ.
ಅವರು ಭಾನುವಾರ ಮೂಡಿಗೆರೆ ತಾಲ್ಲೂಕಿನ ಹ್ಯಾರಗುಡ್ಡ ಗ್ರಾಮದಲ್ಲಿ ನಿವೃತ್ತ ಇಂಜಿನಿಯರ್ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಜಗದೀಶ್ ಅಸೋಷಿಯೇಟ್ಸ್ ಸಂಸ್ಥೆಯಿಂದ ನೂತನವಾಗಿ ಪ್ರಾರಂಭಿಸುತ್ತಿರುವ ಗೋಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ನಮ್ಮ ದೇಶಿಯ ಗೋವಿನ ತಳಿಗಳು ಕಣ್ಮರೆಯಾಗುತ್ತಿವೆ. ವಿದೇಶಿ ತಳಿ ರಾಸುಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಆರೋಗ್ಯಕ್ಕೆ ಪೂರಕವಾದ ಹಾಲನ್ನು ನೀಡುವ ನಮ್ಮ ದೇಶಿಯ ಗೋತಳಿಗಳ ಸಾಕಾಣಿಕೆ ಮತ್ತು ಅಭಿವೃದ್ಧಿಯ ಕಡೆಯ ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹ್ಯಾರಗುಡ್ಡೆಯಲ್ಲಿ ಶಿವಪ್ರಕಾಶ್ ಕುಟುಂಬದವರು ಗೋಶಾಲೆ ಪ್ರಾರಂಭಿಸಿರುವುದು ಮತ್ತು ಸ್ಪೈಷಸ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಮತ್ತು ಮಾದರಿ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂದಿನ ನಮ್ಮ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನಮ್ಮ ಆಹಾರಕ್ರಮ ಕಾರಣವಾಗಿದೆ. ದಿನದಿಂದ ದಿನಕ್ಕೆ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ಕಾಡುತ್ತಿರುವುದು, ಚಿಕ್ಕ ವಯಸ್ಸಿನವರಲ್ಲಿ ಹೃದಯಘಾತ ಸೇರಿದಂತೆ ವಿವಿಧ ರೀತಿಯ ಅನಾರೋಗ್ಯ ಕಾಣಿಸಿಕೊಳ್ಳುತ್ತಿರುವುದು ಇವಕ್ಕೆಲ್ಲ ನಾವು ನಮ್ಮ ಮೂಲ ಶ್ರಮ ಸಂಸ್ಕೃತಿಯನ್ನು, ದೇಶಿಯ ಆಹಾರ ಕ್ರಮವನ್ನು ತ್ಯಜಿಸಿ ವಿದೇಶಿ ಸಂಸ್ಕೃತಿಗೆ, ದೈಹಿಕ ಶ್ರಮವಿಲ್ಲದ ಜೀವನ ಶೈಲಿಗೆ ಮತ್ತು ಜಂಕ್ ಫುಡ್ ಆಹಾರ ಕ್ರಮಕ್ಕೆ ಮಾರುಹೋಗಿರುವುದು ಕಾರಣವಾಗಿದೆ. ಇದರಿಂದ ನಮ್ಮ ಮಕ್ಕಳು ಮತ್ತು ಯುವಕರನ್ನು ಪಾರುಮಾಡಲು ವ್ಯಾಪಕ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಗೋಶಾಲೆ ಪ್ರಾರಂಭಿಸುತ್ತಿರುವ ಶಿವಪ್ರಕಾಶ್ ಹ್ಯಾರಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ; ನಾವು ಈಗಾಗಲೇ ಹಲವು ಗೋವುಗಳನ್ನು ಸಾಕಿದ್ದು, ಇದೀಗ ಇನ್ನಷ್ಟು ವಿಸ್ತಾರವಾಗಿ ಮಾಡುವ ಉದ್ದೇಶದಿಂದ ಇಂದು ಸ್ವಾಮೀಜಿಗಳಿಂದ ಗೋಶಾಲೆಯನ್ನು ಉದ್ಘಾಟನೆ ಮಾಡಿಸಲಾಗುತ್ತಿದೆ. ಗೋಶಾಲೆ ಪ್ರಾರಂಭಿಸುತ್ತಿರುವ ಭತ್ತದ ಗದ್ದೆ ಜಾಗ ನಮ್ಮ ಸಹೋದರರಾಗಿದ್ದ ದಿವಂಗತ ಜಗದೀಶ್ ಅವರ ಕುಟುಂಬಕ್ಕೆ ಸೇರಿದ್ದು, ನಮ್ಮ ಪ್ರೀತಿಯ ಸಹೋದರರಾಗಿ ಅಕಾಲಿಕವಾಗಿ ನಮ್ಮನ್ನಗಲಿದ್ದ ಜಗದೀಶ್ ಅವರ ನೆನಪಿನಲ್ಲಿ ಜಗದೀಶ್ ಅಸೋಷಿಯೇಟ್ಸ್ ಸಂಸ್ಥೆಯ ಹೆಸರಿನಲ್ಲಿ ಈ ಎಲ್ಲಾ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇವೆ. ಇಲ್ಲಿ ಸ್ಪೈಸಸ್ ಪಾರ್ಕ್ ಮಾಡುವ ಉದ್ದೇಶವಿದ್ದು, ಏಲಕ್ಕಿ, ಕಾಳುಮೆಣಸು, ಹಣ್ಣಿನ ಗಿಡಗಳು, ಗೋವುಗಳಿಗೆ ಮೇವಿನ ಸಸ್ಯಗಳನ್ನು ಬೆಳೆದು ಒಂದು ಸಮಗ್ರ ಕೃಷಿ ಮಾದರಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಹಳಸೆ ಶಿವಣ್ಣ, ಸಾಹಿತಿ ಹಳೇಕೋಟೆ ರಮೇಶ್, ಡಾ. ಹಳೇಕೋಟೆ ಕುಮಾರ್ ಮಾತನಾಡಿದರು.
ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ಮುಖಂಡರಾದ ಬಿ.ಕೆ. ಲಕ್ಷ್ಮಣಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಹ್ಯಾರಗುಡ್ಡೆ ಗ್ರಾಮಸ್ಥರು, ಶಿವಪ್ರಕಾಶ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.


