ನರ್ಸಿಂಗ್ ವೃತ್ತಿಗೆ ಸೇವಾ ಮನೋಭಾವ ಪ್ರಧಾನ ಎಂದು ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್ ಕಾರ್ಯದರ್ಶಿ ಶಶಿಕಲಾ ನಾಯ್ಕ ನುಡಿದರು.
ಚಿಕ್ಕಮಗಳೂರು ಕಲ್ಯಾಣ ನಗರದ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್ ಮೊದಲವರ್ಷ ವಿದ್ಯಾರ್ಥಿಗಳ ಸ್ವಾಗತಿಸುವ ಜ್ಞಾನ ಜ್ಯೋತಿಗಳು ಸಮಾರಂಭದ ಅಧ್ಯಕ್ಷತೆವಹಿಸಿ ಅವರಿಂದು ಮಾತನಾಡಿದರು.
ಭಾರತದ ಮಣ್ಣಿನಲ್ಲಿ ಸೇವಾ ಮನೋಭಾವ ಸಹಜವಾಗಿರುತ್ತದೆ. ಸಾಮಾನ್ಯವಾಗಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಸೇರಿದಂತೆ ತುಂಬುಕುಟುಂಬದಿಂದ ಬಂದವರಿಗೆ ಬಾಂಧವ್ಯ ಸೇವಾ ಮನೋಧರ್ಮ ರಕ್ತಗತವಾಗಿರುತ್ತದೆ. ನರ್ಸಿಂಗ್ ವೃತ್ತಿಗೆ ಭಾರತ ಮೂಲದವರಿಗೆ ವಿಶೇಷ ಆದ್ಯತೆ ಇದೆ. ಅರಬ್ ರಾಷ್ಟ್ರಗಳು ಸೇರಿದಂತೆ ಬಹುತೇಕ ಮುಂದುವರೆದ ರಾಷ್ಟ್ರಗಳಲ್ಲಿ ಭಾರತದ ನರ್ಸ್‍ಗಳಿಗೆ ಅಪಾರ ಬೇಡಿಕೆ ಇದೆ ಎಂದರು.
ಎರಡು-ಮೂರುದಶಕಗಳ ಹಿಂದಿನವರೆಗೂ ನರ್ಸ್ ಎಂದರೆ ಮೂಗು ಮುರಿಯುವವರೆ ಹೆಚ್ಚಾಗಿದ್ದರು. ಕೇರಳ ಮೂಲದವರು ಹೆಚ್ಚು ನರ್ಸಿಂಗ್ ತರಬೇತಿಗೆ ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನರ್ಸಿಂಗ್ ಪ್ರಾಮುಖ್ಯತೆಯ ಅರಿವು ಸಮಾಜಕ್ಕೆ ಆಗಿದೆ. ಎಲ್ಲೆಡೆಯಿಂದ ಈ ವೃತ್ತಿಗೆ ಆಸಕ್ತಿ ವ್ಯಕ್ತವಾಗುತ್ತಿದೆ. ಜಿಲ್ಲೆಯ ಯುವಜನರು ನರ್ಸಿಂಗ್ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆಂದರು. ಗ್ರಾಮೀಣ ಹಿನ್ನಲೆಯ ಬಡತನದ ಬೇಗೆಯಲ್ಲಿ ನೊಂದುಬೆಂದವರು ಬಹುತೇಕ ನರ್ಸಿಂಗ್ ಕೋರ್ಸ್ ಸೇರುತ್ತಿದ್ದಾರೆ. ಮೂರುವರ್ಷ ಕಲಿತು ತರಬೇತಿ ಪಡೆದರೆ ಬೇಗನೆ ಕೆಲಸ ಪಡೆಯಲು ಇಲ್ಲಿ ಮಾತ್ರ ಅವಕಾಶವಿದೆ ಎಂದು ಶಶಿಕಲಾ ವಿವರಿಸಿದರು.
ನರ್ಸಿಂಗ್ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಸರ್ವೋತ್ತಮ ಕಾರ್ಯವೆಂದು ಪರಿಗಣಿತವಾಗಿದೆ. ಇಲ್ಲಿ ತರಬೇತಿ ಪಡೆದ ಯುವತಿಯರನ್ನು ವಿವಾಹವಾಗಲು ಇತರೆ ವೃತ್ತಿ ನಿರತ ಯುವಕರೂ ಆಸಕ್ತಿ ತೋರುತ್ತಿದ್ದಾರೆ. ಹುಟ್ಟಿನಿಂದಲೇ ಬರುವ ಸೇವಾಮನೋಭಾವದ ವಿಸ್ತರಣೆಗೆ ಇಲ್ಲಿ ವಿಪುಲ ಅವಕಾಶಗಳಿವೆ ಎಂದ ಶಶಿಕಲಾನಾಯ್ಕ, ನರ್ಸಿಂಗ್ ಶಿಕ್ಷಣಕ್ಕೆ ಇಷ್ಟಪಟ್ಟು ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸ್ವಾಗತಿಸಿದರು.
ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಉಮಾ ನಾಗೇಶ್ ಮುಖ್ಯಅತಿಥಿಗಳಾಗಿ ಮಾತನಾಡಿ ಸ್ವಚ್ಛತೆಯ ಬಗ್ಗೆ ವಿಶೇಷವಾಗಿ ಕಾಳಜಿವಹಿಸಬೇಕು. ನರ್ಸಿಂಗ್ ವೃತ್ತಿಯ ಬಗ್ಗೆ ಅಭಿಮಾನವಿರಲಿ, ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ, ಒಳ್ಳೆಯದನ್ನು ಅರಿತು, ಓದಿ ಜ್ಞಾನ ಸಂಪಾದಿಸಬೇಕೆಂದರು.
ಸಮಾರಂಭ ಉದ್ಘಾಟಿಸಿದ ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಮಾತನಾಡಿ ಸನಾತನ ಜೀವನಪದ್ಧತಿಯಲ್ಲೆ ಆರೋಗ್ಯಪಾಲನೆ ಪೂರಕ ಅಂಶಗಳಿವೆ. ಹಬ-ದಿನಗಳ ಆಚರಣೆಯಲ್ಲಿ ದೇಹಕ್ಕೆ ಬೇಕಾದ ಆಹಾರ ಸೇನೆಯ ಪದ್ಧತಿ ಇದೆ. ಚರಕ, ಸುಶ್ರೂಷ ಸೇರಿದಂತೆ ನಮ್ಮ ಋಷಿಮುನಿಗಳು ವೈದ್ಯರೂ ಆಗಿದ್ದರು. ಮನೆಮದ್ದು, ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೆ ಆಚರಣೆಯಲ್ಲಿತ್ತು ಎಂದು ಆನೆಮುಖಹೊತ್ತ ಗಣಪತಿಯ ಕಥೆಯನ್ನು ಉಲ್ಲೇಖಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವ, ತಾಳ್ಮೆ, ಸಹನೆ, ನಗುಮುಖ ಅತ್ಯವಶ್ಯ. ಇಷ್ಟಪಟ್ಟು ಕಲಿತರೆ ಕಷ್ಟವಾಗುವುದಿಲ್ಲ. ಉತ್ತಮ ಬೋಧನೆಯ ಜೊತೆಗೆ ಸೌಲಭ್ಯ-ಸೌಕರ್ಯಗಳನ್ನು ಹೊಂದಿರುವ ನೈಟಿಂಗೇಲ್ ಸ್ಕೂಲ್ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಸುಮಿತ್ರಾ ನುಡಿದರು.
ಪ್ರಾಂಶುಪಾಲೆ ಕವಿತಾ ಮತ್ತು ವ್ಯವಸ್ಥಾಪಕಿ ಶೋಭಿತಾ ಮಾತನಾಡಿದರು. ಉಪನ್ಯಾಸಕರುಗಳಾದ ವರ್ಷಿತಾ ಮತ್ತು ನಯನಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಂಕಿತಾ ಮತ್ತು ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಉಷಾ ಪ್ರಾರ್ಥಿಸಿ, ಅಮೃತಾ ಸ್ವಾಗತಿಸಿ, ಮೌಲ್ಯ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.


