November 1, 2026
;
havali

 

 

ತಾನು ಪ್ರತಿನಿಧಿಸುತ್ತಿದ್ದ ಗ್ರಾಮದ ಜನರಿಗೆ ಮನೆ ಜಾಗದ ಹಕ್ಕುಪತ್ರ ನೀಡಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾನು ಪ್ರತಿನಿಧಿಸುತ್ತಿದ್ದ ಗ್ರಾಮದ ಜನರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಅವರು ಆ ಜಾಗದ ಮಣ್ಣನ್ನು ಹೊತ್ತು ಕಾಲ್ನಡಿಗೆ ಮೂಲಕ ಮೂಡಿಗೆರೆ ತಾಲ್ಲೂಕು ಕಛೇರಿಗೆ ತಂದಿದ್ದರು.

ಇದೀಗ ಇವರ ಹೋರಾಟಕ್ಕೆ ಜಯ ದೊರಕಿದೆ. ಗ್ರಾ.ಪಂ. ಸದಸ್ಯರ ಕಾಳಜಿಗೆ ಸ್ಪಂದಿಸಿರುವ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ ಮೂರ್ತಿಯವರು ಕೆಲವು ಫಲಾನುಭವಿಗಳಿಗೆ ಅವರ ಜಾಗದ ಹಕ್ಕುಪತ್ರ ವಿತರಿಸಿದ್ದಾರೆ.

ಜಾಗದ ಮಣ್ಣು ಹೊತ್ತು ಮೂಡಿಗೆರೆ ತಾಲ್ಲೂಕು ಕಛೇರಿಗ ಆಗಮಿಸಿದ್ದ ನವೀನ್

ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಗ್ರಾಮದ ಸರ್ವೆ ನಂಬರ್ 3 ರಲ್ಲಿ ಸಲ್ಲಿಸಿದ 94/c ಅರ್ಜಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ.

ಹಾಗೆಯೇ ಇನ್ನುಳಿದ ಸರ್ವೇ ನಂಬರ್ 111 ವಾಟೇಖಾನ್, ಸರ್ವೇ ನಂಬರ್ 9 ಸಂಪಿಗೆಖಾನ್, ಗ್ರೂಪ್ ಹೌಸ್ ಉರ್ವಿಖಾನ್ , ಸರ್ವೇ ನಂಬರ್ 41 ನಿಡುವಾಳೆ ಭಗತ್ ಸಿಂಗ್ ನಗರ ಹಾಗೆ ಸರ್ವೆ ನಂಬರ್ 77 ಅರೆಕುಡಿಗೆ ಮೆಕ್ಕಿಮನೆ ಮರ್ಕಲ್ 50 ಕುಟುಂಬಗಳ ನಿವಾಸಿಗಳಿಗೆ ಅರಣ್ಯ ಒಪ್ಪಿಗೆ ಪತ್ರ ಸಿಕ್ಕಿದ ತಕ್ಷಣ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ತಮ್ಮ ಹೋರಾಟಕ್ಕೆ ಸ್ಪಂದಿಸಿದ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ನವೀನ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಉಳಿದ ಫಲಾನುಭವಿಗಳಿಗೂ ಆದಷ್ಟು ಬೇಗ ಹಕ್ಕು ಪತ್ರ ಸಿಗುವಂತಾಗಲಿ ಎಂದು ಆಗ್ರಹಿಸಿದ್ದಾರೆ.

 

 

Leave a Reply

Your email address will not be published. Required fields are marked *