ಬೇಲೂರಿನಲ್ಲಿ ಶಿಥಿಲಗೊಂಡಿದ್ದ ಕಟ್ಟಡದ ಸಜ್ಜಾ ಕುಸಿದು ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮೃತ ಮಹಿಳೆಯನ್ನು ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ (45) ಎಂದು ಗುರುತಿಸಲಾಗಿದೆ. ದುರಂತದಲ್ಲಿ ಗಾಯಗೊಂಡಿದ್ದ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವಿಗೀಡಾಗಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕುಸಿದ ಕಟ್ಟಡದ ಕೆಳಗೆ ಮಹಿಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇನ್ನೂ ಕೆಲವು ತಿಂಗಳ ಹಿಂದೆ ಜ್ಯೋತಿಯವರ ಪತಿ ಗೋಪಿ ಸಹ ಸಾವನ್ನಪ್ಪಿದ್ದರು. ಇದರಿಂದ ದಂಪತಿಗಳ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ
ಮಾರ್ಚ್ 9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರಿದ್ದ ಪಾಳು ಬಿದ್ದಿದ್ದ ಕಟ್ಟಡ ಕುಸಿದಿತ್ತು. ಈ ವೇಳೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದು. ಅಲ್ಲಿ ವ್ಯಾಪಾರ ಮಾಡುತ್ತಿದ್ದ ನಜೀರ್ ಹಾಗೂ ಹಣ್ಣು ಖರೀದಿಸಲು ಬಂದಿದ್ದ ಅಮರನಾಥ್ ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಹಣ್ಣಿನ ವ್ಯಾಪಾರಿ ಜ್ಯೋತಿ ಮತ್ತು ಸೊಪ್ಪಿನ ವ್ಯಾಪಾರಿ ನೀಲಮ್ಮ ಎಂಬುವರರು ತೀವ್ರ ಗಾಯಗೊಂಡಿದ್ದರು. ಇವರಲ್ಲಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ನೀಲಮ್ಮ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಇದರಿಂದಾಗಿ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.


