October 31, 2026
;
helicopter1

 

 

ಉತ್ತರಾಖಂಡದಲ್ಲಿರುವ ಬದರಿನಾಥ ಧಾಮದಿಂದ ಫಾಟ್‌ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಒಂದು ಪ್ರತಿಕೂಲ ಹವಾಮಾನದಿಂದಾಗಿ ಜೋಶಿಮಠ   ಸಮೀಪ ಪತನಗೊಂಡು 6 ಮಂದಿ ಮೃತಪಟ್ಟಿದ್ದಾರೆ.

ಜೋಶಿಮಠದ ‘ಹಾತಿ ಪಹಾಡ್’ ಹಿಂಭಾಗದಲ್ಲಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಕ್ಯಾ. ಹಿಮಾಂಶು ಜೊತೆ ಪ್ರಯಾಣಿಕರಾದ ಪ್ರತಾಪ, ಅರುಣ್‌, ಶಂಕರ್‌ ಗೌಡ, ಸುಧೀರ್‌, ಕೆ ಹೆಎಸ್‌ ನಟರಾಜ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಐದು ಮಂದಿ ಪ್ರಯಾಣಿಕರು ಕರ್ನಾಟಕ ಮೂಲದವರು.

ಬದರಿನಾಥ ಧಾಮದಿಂದ ಹೊರಟಿದ್ದ ಈ ಹೆಲಿಕಾಪ್ಟರ್, ಬದರಿನಾಥ ಮತ್ತು ಜೋಶಿಮಠ ನಡುವೆ ಹಾರಾಟ ನಡೆಸುತ್ತಿದ್ದ ವೇಳೆ ಏಕಾಏಕಿ ನಾಪತ್ತೆಯಾಗಿ, ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಡಿದುಕೊಂಡಿದೆ ಎಂದು ಚಮೋಲಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಆಡಳಿತ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಚಾಯಿ ಗ್ರಾಮ ಹಾಗೂ ಹಾತಿ ಪಹಾಡ್ ಸುತ್ತಮುತ್ತಲಿನ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳು ಸುಟ್ಟು ಕರಕಲಾಗಿದ್ದ ಮೃತದೇಹಗಳನ್ನ ಪತ್ತೆಹಚ್ಚಿವೆ. ಮೃತರನ್ನು ಕ್ಯಾ. ಹಿಮಾಂಶು ಸಬರ್ವಾಲ್, ಬೆಂಗಳೂರು ಮೂಲದವರಾದ ವಿ.ಬಿ ಶಂಕರ್‌ಗೌಡ, ಸಕಲೇಶಪುರದ ಪ್ರತಾಪ್ ಗೌಡ ಬಾಚಿಹಳ್ಳಿ ನಿಂಗಾರಾಜನ್, ಅರುಣ್ ಸಾಳುಂಕೆ, ಸುಧೀರ್ ಹಾಗೂ ಹೆಚ್.ಎಸ್ ನಟರಾಜ್ ಎಂದು ಗುರುತಿಸಲಾಗಿದೆ.

ದುರಂತದಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಸಾವನ್ನಪ್ಪಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಚಾರ್‌ಧಾಮ್‌ ಪ್ರವಾಸಕ್ಕೆ ತೆರಳಿದ್ದ ಅರುಣ್‌ ಸಾಳುಂಕೆ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಅರುಣ್ ಸಾಳುಂಕೆ ಪ್ರಸ್ತುತ ಬೆಂಗಳೂರಿನ ಸಿಸಿಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವಘಡದಲ್ಲಿ ತುಮಕೂರಿನ   ಹುಲಿಯೂರುದುರ್ಗದ ಹೆಚ್‌ಎನ್ ನಟರಾಜು ಸಾವನ್ನಪ್ಪಿದ್ದು, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದರು.

ಶಂಕರೇಗೌಡ ಮತ್ತು ಸುಧೀರ್ ವೃತ್ತಿಯಲ್ಲಿ ವಕೀಲರಾಗಿದ್ದರು ಎಂಬುದು ಗೊತ್ತಾಗಿದೆ.

ಪ್ರತಾಪ್ ಗೌಡ ಮೂಲತಃ ಸಕಲೇಶಪುರ ತಾಲ್ಲೂಕಿನರಾಗಿದ್ದು, ಹೆತ್ತೂರು ಸಮೀಪದ ಬಾಚಿಹಳ್ಳಿ ಮೂಲದವರು. ಇವರು ಸಕಲೇಶಪುರ ಭಾಗದಲ್ಲಿ ವ್ಯಾಪಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ಅವರು  ಅರುಣ್ ಸಾಲುಂಕೆಗೆ ಸ್ನೇಹಿತರಾಗಿದ್ದು ಎಲ್ಲರೂ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು.

 

 

Leave a Reply

Your email address will not be published. Required fields are marked *