ಖ್ಯಾತ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ಸುನೀಲ್ ಜೆ. ಗೌಡ ಅವರು ರಮೇಶ್ ಅರವಿಂದ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ದೇವಾಲಯದ ವ್ಯವಸ್ಥಾಪಕರಾದ ಎನ್. ಆರ್. ನಾಗರಾಜ್ ಭಟ್, ಅರ್ಚಕರಾದ ನಾಗೇಂದ್ರ ಕಾರಂತ್, ಸಿಬ್ಬಂದಿ ಸೂರ್ಯನಾರಾಯಣ, ಹಾಗೂ ಸ್ಥಳೀಯ ಗ್ರಾಮಸ್ಥರು ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದರು.

ಪೂಜಾ ಕಾರ್ಯಕ್ರಮವು ಶ್ರದ್ಧಾ ಮತ್ತು ಭಕ್ತಿಯ ವಾತಾವರಣದಲ್ಲಿ ನಡೆಯಿತು. ದೇವಾಲಯಕ್ಕೆ ಆಗಮಿಸಿದ ರಮೇಶ್ ಅರವಿಂದ್ ಅವರ ಅಭಿಮಾನಿಗಳು ಹಾಗೂ ಭಕ್ತರು ಅವರೊಂದಿಗೆ ಕ್ಷಣಕಾಲ ಸಂವಾದ ನಡೆಸಿ ಸಂತೋಷ ವ್ಯಕ್ತಪಡಿಸಿದರು.
ಈ ದೇವಾಲಯಕ್ಕೆ ಹಿಂದೆ ನಟ ಪುನಿತ್ ರಾಜ್ ಕುಮಾರ್ ಅವರು ಅನೇಕ ಬಾರಿ ಭೇಟಿ ನೀಡಿದ್ದರು. ಈ ವಿಚಾರವನ್ನು ಅರ್ಚಕರು ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡರು.
ಸುಂದರ ಪ್ರಕೃತಿಯ ನಡುವೆ, ಕಾಫಿ ತೋಟದಿಂದ ಆವೃತ್ತವಾಗಿರುವ ದೇವಾಲಯದಲ್ಲಿ ರಮೇಶ್ ಅರವಿಂದ್ ತಮ್ಮ ಕುಟುಂಬದೊಂದಿಗೆ ಬಹುಹೊತ್ತು ಕಳೆದರು.


