ಮಲೆನಾಡಿನಲ್ಲಿ ಛಲವಾದಿ ಬಲಗೈ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದು, ನಮ್ಮ ಸಮುದಾಯದವರು ತಮ್ಮ ಮನೆಗೆ ಜಾತಿ ಗಣತಿಗೆ ಬಂದಾಗ ಉಪಜಾತಿಯನ್ನು ಹೆಮ್ಮೆಯಿಂದ ಛಲವಾದಿ ಬಲಗೈ ಎಂದು ಬರೆಸಬೇಕೆಂದು ಛಲವಾದಿ ಮಹಾಸಭಾದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ ಮನವಿ ಮಾಡಿದರು.
ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಒಳ ಮೀಸಲಾತಿ ಜಾರಿಗೊಳಿಸಲು ಕಾರ್ಯಪ್ರವೃತ್ತವಾಗಿದ್ದು, ದಲಿತ ಸಮುದಾಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯ 101 ಉಪಜಾತಿಗಳಿಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಅವಕಾಶವಾಗುವಂತೆ ಜಾತಿ ಗಣತಿಯಲ್ಲಿ ಉಪಜಾತಿ ಘಲವಾದಿ ಬಲಗೈ ಎಂದು ಸರಿಯಾದ ಮಾಹಿತಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ, ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ ಹಾಗೂ ಇತರೆ ಸೌಲಭ್ಯ ಪಡೆಯಲು ಇದೊಂದು ಸುವರ್ಣಾವಕಾಶ. ಹಾಗಾಗಿ ಜಾತಿಗಣತಿ ಸಮೀಕ್ಷೆ ಸಂದರ್ಭದಲ್ಲಿ ಅಧಿಕಾರಿಗಳು ನಿಮ್ಮ ಉಪಜಾತಿ ಬಗ್ಗೆ ಮಾಹಿತಿ ಕೇಳಿದಾಗ ನಮ್ಮ ಸಮುದಾಯದವರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಏನೇ ಇರಲಿ, ಉಪಜಾತಿ ಛಲವಾದಿ ಬಲಗೈ ಜಾತಿ ಎಂದೇ ಹೆಮ್ಮೆಯಿಂದ ಬರೆಸಬೇಕು. 027.1 ಛಲವಾದಿಯ ಕೋಡ್ ಆಗಿರುತ್ತದೆ ಎಂದು ಹೇಳಿದರು.
ಛಲವಾದಿ ಮಹಾಸಭಾದ ಕಾರ್ಯದರ್ಶಿ ರಾಜೇಶ್, ಬಣಕಲ್ ಹೊಬಳಿ ಅಧ್ಯಕ್ಷ ರಮೇಶ್ ಬೈರಗದ್ದೆ, ಕೃಷ್ಣ ಮಗ್ಗಲಮಕ್ಕಿ, ಧರ್ಮಕುಮಾರ್ ಉಪಸ್ಥಿತರಿದ್ದರು.


