ಪಾಕಿಸ್ತಾನದ ಜೊತೆಗಿನ ಕದನ ವಿರಾಮಕ್ಕೆ ಭಾರತ ಒಪ್ಪಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಮೂರು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಕರೆ ಮಾಡಿ ದಾಳಿ ನಿಲ್ಲಿಸುವಂತೆ ಒತ್ತಾಯಿಸಿದ್ದು, ಆ ನಂತರ ಕದನ ವಿರಾಮ ಪ್ರಕ್ರಿಯೆ ಪ್ರಾರಂಭಿಸಲಾಯಿತು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಪಾಕಿಸ್ತಾನದ ಡಿಜಿಎಂಒ ಭಾರತಕ್ಕೆ ಮಧ್ಯಾಹ್ನ 3.35ರ ಸುಮಾರಿಗೆ ಕರೆ ಮಾಡಿದ್ದರು ಎಂದು ಮಿಶ್ರಿ ತಿಳಿಸಿದ್ದು ಸದ್ಯ ಕದನ ವಿರಾಮವು 5 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು. ಮೇ 12ರಂದು ಮಧ್ಯಾಹ್ನ 12:00 ಗಂಟೆಗೆ ಉಭಯ ದೇಶಗಳ ಡಿಜಿಎಂಒಗಳು ಮಾತುಕತೆ ನಡೆಸಲಿದ್ದಾರೆ ಎಂದು ಮಿಶ್ರಿ ತಿಳಿಸಿದ್ದರು.
ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ. ಮೇ 12ರಂದು ಉಭಯ ದೇಶಗಳು ಮಾತುಕತೆ ನಿರ್ಧರಿಸಿವೆ. ಈ ಸಭೆಗೆ ಅಮೆರಿಕಾ ಮಧ್ಯಸ್ಥಿಕೆ ವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರು ದಾಳಿ ಮಾಡಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತವು ʻಆಪರೇಷನ್ ಸಿಂಧೂರʼ ಹೆಸರಿನಡಿಯಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು.
ಈ ದಾಳಿಗೆ ಪ್ರತಿಯಾಗಿ ಪಾಕ್ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಭಾರತೀಯ ಸೇನೆಯು ಪಾಕ್‌ನ ಡ್ರೋನ್ ಹಾಗೂ ಕ್ಷಿಪಣಿಗಳಿಗೆ ಹೊಡೆದುರುಳಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು.
ಡೊನಾಲ್ಡ್ ಟ್ರಂಪ್ ಪೋಸ್ಟ್
ತಮ್ಮ ಮಧ್ಯಸ್ಥಿಕೆ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದರು.


