18Mudigere1E

 

 

ಕೋಟ್ಯಾಂತರ ಹಣ ಖರ್ಚು ಮಾಡಿ ಅದ್ದೂರಿಯಿಂದ ನಡೆದ ಎಷ್ಟೋ ವಿವಾಹಗಳು ಒಂದೇ ವಾರಕ್ಕೆ ವಿಚ್ಛೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಪ್ರಕರಣಗಳು ನಾವಿಂದು ಕಾಣುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಗೌರಿಗದ್ದೆ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು.

ಅವರು ಭಾನುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ 9 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸುಳ್ಳು ವ್ಯಭಿಚಾರ ಇದ್ದ ಹಾಗೆ. ಸುಳ್ಳಿನಿಂದ ಮಾನಸಿಕವಾಗಿ ಮೋಸ ಹೋಗುವುದರಿಂದ ಇಂದು ಸಂಬಂಧಗಳಲ್ಲಿ ಒಡಕುಂಟಾಗುತ್ತಿದೆ. ಹಾಗಾಗಿ ಸತ್ಯವನ್ನೇ ನುಡಿದು ಸತ್ಯದ ದಾರಿಯಲ್ಲಿಯೇ ನಡೆದರೆ ನೆಮ್ಮದಿ ಜೀವನ ಕಂಡುಕೊಳ್ಳಬಹುದು. ಯಾವ ವ್ಯಕ್ತಿಯನ್ನೂ ಜಾತಿ ಮತ್ತು ಹಣದಲ್ಲಿ ಅಳೆಯಬಾರದು. ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕೆಂದು ಹೇಳಿದರು.

ಬದುಕಿನಲ್ಲಿ ಜಾತಿ ಹಣ ಮುಖ್ಯವಲ್ಲ. ಯಾರಲ್ಲಿ ಉತ್ತಮ ಸಂಸ್ಕಾರದ ನೀತಿ ಇರುತ್ತದೆಯೋ ಆತನೇ ಮಹಾನ್ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ರಾಮನ ಹೆಸರು ಕೊಟ್ಟಿದ್ದು ವಾಲ್ಮಿಕಿ ಬರೆದ ರಾಮಾಯಣದಿಂದ. ಶ್ರೀ ರಾಮ ಎಂದರೆ ಮೋಕ್ಷ ಕೊಡುವ ಮಂತ್ರ. ಅಲ್ಲದೇ ಎಲ್ಲಾ ಮಾನವರು ವಿಷ್ಣು ಸ್ವರೂಪ. ಎಲ್ಲರನ್ನೂ ವಿಷ್ಣು ರೂಪದಲ್ಲಿ ನೋಡಿದರೆ ಜಾತಿ ಎಂಬುದು ಇರುವುದಿಲ್ಲ. ಒಳ್ಳೆ ಕೆಲಸ ಮಾಡುವವರಿಗೆ ಹೆಗಲು ಕೊಡುವ ಕಾರ್ಯ ಮಾಡಬೇಕು. ಸಾಮೂಹಿಕ ವಿವಾಹದಂತಹ ಪುಣ್ಯದ ಕಾರ್ಯ ಪ್ರತಿ ಗ್ರಾಮಗಳಲ್ಲಿ ನಡೆಯುವಂತಾಗಬೇಕೆಂದು ಹೇಳಿದರು.

ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಳ ಸಾಮೂಹಿಕ ವಿವಾಹ ಇದು ತನ್ನ ತಾಯಿಯ ಕನಸಿನ ಕೂಸು. ಬಡವರು ಸಾಲ ಮಾಡಿ, ಜೀವನ ಪೂರ್ತಿ ದುಡಿಯಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವುದನ್ನು ತಪ್ಪಿಸುವ ಸಲುವಾಗಿ  ಕಳೆದ 27 ವರ್ಷದಿಂದ ಈ ಮಹತ್ಕಾರ್ಯವನ್ನು ತನ್ನ ತಾಯಿ ಭಾವನಾತ್ಮವಕವಾಗಿ ನಡೆಸಿಕೊಂಡು ಬಂದಿದ್ದಾರೆಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಜೀವನ ತಿಳಿದುಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯಬೇಕು. ದುಶ್ಚಟ್ಕಕೆ ಬಲಿಯಾಗದೇ ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆ ಅಲಂಕರಿಸುವಂತೆ ನವ ದಂಪತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಂಗಳೂರಿನ ನಿವೃತ್ತ ಪ್ರಾಂಶುಪಾಲ ಹಿಲ್ಡರಾಯಪ್ಪನ್ ಮಾತನಾಡಿ, ಸರಳ ಸಾಮೂಹಿಕ ವಿವಾಹದಲ್ಲಿ ಸಿಗುವ ಆಶೀರ್ವಾದ ಸ್ಟಾರ್ ಹೊಟೇಲ್‍ಗಳಲ್ಲಿ ಸಿಗಲಾರದು. ಎಲ್ಲಾ ಕಡೆಯಲ್ಲಿ ಜಾನಪದ ಸೊಗಡು ವಿಭಿನ್ನ ರೀತಿಯಲ್ಲಿದೆ. ಆದರೆ ಮಲೆನಾಡು ಭಾಗದ ಜಾನಪದ ಸೊಗಡು ತಾನು ಕಂಡಿರಲಿಲ್ಲ. ಅದನ್ನು ಇಂದು ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದಂತಾಯಿತು ಎಂದು ಹೇಳಿದರು.

ದಲಿತ ಪುರೊಹಿತರ ಕನ್ನಡ ಮಂತ್ರ : 9 ಜೋಡಿಗಳು ವೈವಾಹಿಕ ಬದುಕಿಗೆ ಪಾದಾರ್ಪಣೆ

ಸಕ್ಕಳಿ ಸಕ್ಕಳಿ ಸಾಸಂಭ ಗಲಿಗಲಿ, ಬಾರ ಬಾರ ಮದವಣ್ಣ ಬಲಗಾಲ ಮುಂದಿಟ್ಟು. ಬಲಕೇನು ಕಂಡೆ? ಬಾಳೆ ತೋಟ ಕಂಡೆ. ಎಡಕ್ಕೇನು ಕಂಡ? ಎಲೆ ತೋಟ ಕಂಡೆ. ಮುಂದೇನು ಕಂಡೆ? ಕಟ್ಟೇಯ ಕಂಡೆ. ಕಟ್ಟೇಯ ಮುಂದೆ ತಕ್ಕೇಯ ಎತ್ತು, ತವರೆಯ ಹೂವ, ಬೆಳ್ಳಿಕೋಲು ಹಿಡಿಕೊಂಡು ಬೆಳಕಾಗಿ ಬರುವಾಗ ಯಾರ್ಯಾರ ಕಂಡ? ಭೂಮಿತಾಯಿ ಕಂಡೆ. ಬಸವೇಶ್ವರನ ಕಂಡೆ. ಹಳ್ಳಿದೇವನ ಕಂಡೆ. ಬೆಳ್ಳಿ ದೇವನ ಕಂಡೆ. ಶುಕ್ರನ ಕಂಡೆ. ಸೂರ್ಯ ದೇವನ ಕಂಡೆ. ವಾಯು ದೇವರ ಕಂಡೆ. ವರುಣ ದೇವನ ಕಂಡೆ. ಅಗ್ನಿ ದೇವರ ಕಂಡೆ. ಮಹೋರ್ತವೇ ಸಾಬುದಾನ. ಸುಲಗ್ನ ಸಾಬುದಾನ ಎಂಬ ಕನ್ನಡ ಮಂತ್ರವನ್ನು ದಲಿತ ಪುರೋಹಿತರಾದ ಎಚ್.ಟಿ.ಸುಬ್ರಹ್ಮಣ್ಯ, ಕೆ.ಎಲ್.ಸಾಗರ್, ಕೋಮರಾಜ್ ಚಕ್ರಮಣಿ, ರಮೇಶ್ ದಾರಹಹಳ್ಳಿ, ತಿಮ್ಮಯ್ಯ ಹಾಲೂರು, ದೇವರಾಜ್ ಸಬ್ಲಿ ಪಠಿಸಿದರು. ಮದುವೆಯಲ್ಲಿ ಬಿಳಿಯಪ್ಪ ಮತ್ತು ಜಯಶೀಲಾ ದಂಪತಿಗಳು ದಾರೆ ಎರೆಯುವ ಕಾರ್ಯ ನೆರವೇರಿಸಿದರು.

ನಂತರ ಮಲೆನಾಡು ಪ್ರತಿಭೆಗಳಿಂದ ಮಲೆನಾಡಿನ ಪ್ರಸಿದ್ದ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯ ಹಂಜಾ, ಬೆಂಗಳೂರಿನ ಡಾ. ಪಾರ್ವತಿ ಧನಂಜಯ್, ರೇಣುಕಾ, ಲಕ್ಷ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಬಿ.ಎಸ್.ಜಯರಾಂ, ಸುಬ್ರಾಯಗೌಡ, ಬಿ.ಎಂ.ಶಂಕರ್, ಶ್ರೀನಾಥ್, ವೆಂಕಟಮ್ಮ ಹಾಲಯ್ಯ ಮತ್ತಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ