ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರೊಂದಿಗಿನ ಜಟಾಪಟಿಯ ನಂತರ ಮೊದಲ ಬಾರಿಗೆ ಕಾಫಿ ನಾಡಿಗೆ ಆಗಮಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರಿಶಿನ ಕುಂಕುಮ ಕಾಯಿ ಬಳೆ ಸಹಿತ ಬಾಗಿನ ನೀಡಿ ಸ್ವಾಗತಿಸಲು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.
ಸಚಿವರು ನಗರದ ಪ್ರವಾಸಿ ಮಂದಿರದಲ್ಲಿರುವ ವಿಷಯ ತಿಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೂವು, ಹಣ್ಣು, ಬಳೆ, ಅರಿಸಿನ ಕುಂಕುಮ, ಲಕ್ಷ್ಮಿ ವಿಗ್ರಹ ಸೇರಿದಂತೆ ಬಾಗಿನ ಸಹಿತ ಪ್ರವಾಸಿ ಮಂದಿರದ ಎದುರು ತೆರಳಿದ್ದರು.
ಆದರೆ ಪೊಲೀಸರು ಪ್ರವಾಸಿ ಮಂದಿರದ ಒಳಗೆ ತೆರಳಲು ಬಿಜೆಪಿ ಕಾರ್ಯಕರ್ತೆಯರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಬಾಗಿನ ಹಿಡಿದು ಕಾರ್ಯಕರ್ತೆಯರು ಪ್ರವಾಸಿ ಮಂದಿರದ ಗೇಟ್ ಬಳಿಯೇ ಕಾದು ನಿಂತಿದ್ದರು.
ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳಿದರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರತ್ತ ತಿರುಗಿಯೂ ನೋಡಲಿಲ್ಲ.
ಇದರಿಂದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ಸಚಿವರ ಮನೆಗೆ ಯಾರಾದರೂ ಹೋದರೆ ಅರಿಶಿನ ಕುಂಕುಮ ಕೊಡುವುದಿಲ್ಲವೇ? ಕಾಂಗ್ರೆಸ್ಸಿಗರಿಗೆ ಅರಿಶಿನ ಕುಂಕುಮ ಕಂಡರೆ ಭಯ ಎಂದು ಲೇವಡಿ ಮಾಡಿ ತಾವು ತಂದಿದ್ದ ಬಾಗಿನವನ್ನು ಹಿರಿಯ ಬಿಜೆಪಿ ಕಾರ್ಯಕರ್ತೆಗೆ ನೀಡಿ ವಾಪಸ್ ತೆರಳಿದರು.
ಪಾಪ ಅವರು ಸದನದಲ್ಲಿ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಬಾಗಿನ ನೀಡಲು ಬಂದಿದ್ದಾರೆ. ಬಿಜೆಪಿಯವರ ಸೋಗಿನ ಬಾಗಿನದ ಅವಶ್ಯಕತೆ ನನಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನ ಜನತೆ ನನಗೆ ಮನೆ ಮಗಳಂತೆ ಸ್ವಾಗತ ಕೋರಿದ್ದಾರೆ. ಅದು ನನಗೆ ಸಾಕು ಎಂದರು.



