ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ ಛತ್ತೀಸ್‌ಗಢದ ರಾಯ್ಪುರದಲ್ಲಿರುವ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಿತು ಮತ್ತು ಸಭೆಯಲ್ಲಿ ಪ್ರಮುಖ ನಾಲ್ಕು ಕರಡು ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಣಿಕಂಠ ಕಳಸ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವು ರಾಷ್ಟ್ರೀಯ ಅಧ್ಯಕ್ಷ ಡಾ. ರಾಜಶರಣ್ ಶಾಹಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸೊಲಂಕಿ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಆಶೀಷ್ ಚೌಹಾಣ್ ಅವರಿಂದ ದೀಪ ಪ್ರಜ್ವಲನದೊಂದಿಗೆ ಆರಂಭಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳಿಗೆ ಛತ್ತೀಸ್‌ಗಢದ ಪರಂಪರಯ ನೃತ್ಯ ಹಾಗೂ ಸ್ಥಳೀಯ ವಾದ್ಯಗಳೊಂದಿಗೆ ಸ್ವಾಗತ ನೀಡಲಾಯಿತು.

ಸಭೆಯಲ್ಲಿ ನಾಲ್ಕು ಪ್ರಮುಖ ಕರಡು ನಿರ್ಣಯಗಳನ್ನು ಚರ್ಚೆಗೆ ಮಂಡಿಸಲಾಯಿತು. ಇವುಗಳಲ್ಲಿ: ದೇಶದ ಕೋಚಿಂಗ್ ಸಂಸ್ಥೆಗಳ ನಿಯಂತ್ರಣ, ಉಪಕುಲಪತಿಗಳ ನೇಮಕಾತಿಯಲ್ಲಿ ಉಂಟಾಗಿರುವ ವಿಳಂಬ ಹಾಗೂ ವಿವಿ ಗಳಲ್ಲಿನ ರಾಜಕೀಯ ಹಸ್ತಕ್ಷೇಪ ಮತ್ತು ಕಾನೂನು ಸಮಸ್ಯೆಗಳ ಕಾರಣದಿಂದ ಉಂಟಾಗುತ್ತಿರುವ ಅಸ್ಥಿರತೆ, ದೇಶದ ಆಂತರಿಕ ಭದ್ರತೆ ಕುರಿತು ಸರ್ಕಾರ ಮತ್ತು ಸಮಾಜದ ಎಚ್ಚರಿಕೆ ಹಾಗೂ ವಿಶ್ವದ ಮಟ್ಟದಲ್ಲಿ ಭಾರತ ತೆಗೆದುಕೊಂಡಿರುವ ಬಹುಮುಖ ಉಪಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ನಿರ್ಣಯಗಳನ್ನು ಮುಂದಿನ ಎರಡು ದಿನಗಳಲ್ಲಿ ಚರ್ಚಿಸಿ ಮೇ 31ರಂದು ಅಧಿಕೃತವಾಗಿ ಅಂಗೀಕರಿಸಲಾಗುವುದು ಎಂದರು.
ಸಭೆಯ ಉದ್ಘಾಟನಾ ಭಾಷಣದಲ್ಲಿ ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜಶರಣ್ ಶಾಹಿ ಮಾತನಾಡಿ “ಪಹಲ್ಗಾಂನಲ್ಲಿ ನಡೆದ ಇತ್ತೀಚಿನ ಉಗ್ರ ದಾಳಿ ಮಾನವತೆಯ ಇತಿಹಾಸದ ಮೇಲೆ ಕಳಂಕವಾಗಿದೆ. ನಾವು ಅಹಿಂಸೆಯ ಅನುಯಾಯಿಗಳಾಗಿದ್ದರೂ ಸಹ, ಹಿಂಸೆಯ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂಬುದನ್ನು ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ ಮೂಲಕ ದೃಡೀಕರಿಸಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಉಪಕುಲಪತಿಗಳ ನೇಮಕಾತಿಯಲ್ಲಿ ನಡೆಯುವ ವಿಳಂಬವು ಭಾರತದ ಭವಿಷ್ಯವನ್ನು ನಿರ್ಲಕ್ಷಿಸುವಂತೆ. ನಮ್ಮ ಪರಂಪರೆಯಲ್ಲಿ ಶಿಕ್ಷಣದ ಗುರಿ ದೇಹದ ಅಗತ್ಯಗಳನ್ನು ಪೂರೈಸುವ ಅನ್ನಮಯದಿಂದ ಆತ್ಮಸಾಕ್ಷಾತ್ಕಾರದ ಆನಂದಮಯವರೆಗೆ ವಿಸ್ತಾರವಾಗಿದೆ. ನಾವು ವಿದ್ಯಾ ಸಂಸ್ಥೆಗಳನ್ನು ಸೃಜನಾತ್ಮಕ ಹಾಗೂ ಪ್ರೇರಣಾದಾಯಕವಾಗಿಡಬೇಕು, ಇದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅವಶ್ಯಕ. ಈ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಶಿಕ್ಷಣ ಸಂಬಂಧಿ ವಿಷಯಗಳಲ್ಲಿ ಚರ್ಚೆಗೆ ವೇದಿಕೆ ಒದಗಿಸಿ, ಮಹತ್ವದ ಬದಲಾವಣೆಗೆ ಚಾಲನೆ ನೀಡಲಿದೆ.” ಎಂದರು.
ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೊಲಂಕಿ ಮಾತನಾಡಿ “ನಮ್ಮ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುವ ಶೈಲಿ ನಿರಂತರವಾಗಿ ರೂಪಾಂತರಗೊಳ್ಳುತ್ತಿದ್ದು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬದ್ಧವಾಗಿದೆ. ಎಬಿವಿಪಿಯು ಶೈಕ್ಷಣಿಕ ಸಂಸ್ಥೆಗಳಲ್ಲಿ ಎಡಪಂಥೀಯ ಹಾಗೂ ನಕಾರಾತ್ಮಕ ಚಿಂತನೆಗೆ ಪ್ರತಿರೋಧ ನೀಡಿದೆ. ಸೈನಿಕರು ಉಗ್ರರನ್ನು ಸೋಲಿಸುತ್ತಿದ್ದರೆ, ಎಬಿವಿಪಿ ಕಾರ್ಯಕರ್ತರು ಜೆಎನ್‌ಯು ವಿದ್ಯಾರ್ಥಿ ಸಂಘ ಚುನಾವಣೆಗಳಲ್ಲಿ ಕಂಡುಬಂದಂತೆ ಎಡಪಂಥೀಯ ಗುಂಪುಗಳ ಬಲವನ್ನು ಕುಗ್ಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದ ಪ್ರಮುಖ ಬಿಂದು ವಾಗಿದ್ದು, ಇಂದು ಯುವ ಕೇಂದ್ರಿತ ನೀತಿಗಳನ್ನು ರೂಪಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.



