ಸಂಗೀತದಿಂದ ಮನಃಶಾಂತಿ, ಆರೋಗ್ಯಕರ ವಾತಾವರಣ ನಿರ್ಮಾಣ ಸಾಧ್ಯ. ಸಂಗೀತಕ್ಕೆ ಆದ್ಯತೆ ನೀಡಿದ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಿರುತ್ತದೆ. ಅನಗತ್ಯ ಯುದ್ಧಭೀತಿ ಕಡಿಮೆ ಎಂದು ವಿಶ್ರಾಂತ ಶಿಕ್ಷಕ ಹುಲಿಕೆರೆ ಮಹಾಲಿಂಗಯ್ಯ ನುಡಿದರು.
ಚಿಕ್ಕಮಗಳೂರು ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಶ್ರೀ ದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾಮಂಡಳಿ ಸಂಯುಕ್ತವಾಗಿ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಸಂಗೀತ ದಿನ’ವನ್ನು ದಮ್ಮಡಿ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಮಾನವನ ಬದುಕಿನಲ್ಲಿ ಅತ್ಯಂತ ಪ್ರಮುಖವಾದ ಸಂಗತಿ. ಮನಸ್ಸನ್ನು ಅರಳಿಸಿ ಶಾಂತಿ, ನೆಮ್ಮದಿಯನ್ನು ಸ್ಥಾಪಿಸುತ್ತದೆ. ಪ್ರೀತಿ, ವಿಶ್ವಾಸ, ಸ್ನೇಹವನ್ನು ವಿಸ್ತಾರಗೊಳಿಸುವ ಸಂಗೀತ ಅನಗತ್ಯ ದೌರ್ಜನ್ಯ, ಗೊಂದಲ, ಹೊಡೆದಾಟ, ಯುದ್ಧದಂತಹ ಸಂದರ್ಭವನ್ನು ನಿರಾಕರಿಸುತ್ತದೆ. ಸಂಗೀತ ವ್ಯಾಪಕವಾಗಿರುವ ಊರು, ರಾಜ್ಯ, ದೇಶಗಳಲ್ಲಿ ಸಾಮಾನ್ಯವಾಗಿ ಶಾಂತಿ ನೆಲಸಿರುತ್ತದೆ ಎಂದರು.
ಮನುಷ್ಯನ ಜೀವನದ ಎಲ್ಲ ಅನುಭವಗಳೂ ಹಾಡಾಗಿ ಹರಿದಿವೆ. ಆಧ್ಯಾತ್ಮಿಕ ವಿಚಾರಗಳನ್ನು ಸಂಗೀತ ಸುಲಭವಾಗಿ ಜನಮನ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಮೇರುನಟ ಡಾ.ರಾಜಕುಮಾರ ಅವರ ಭಕ್ತಿಗೀತೆಗಳು ಈಗಲೂ ಜನಮಾನಸದಲ್ಲಿ ಹಸಿರಾಗಿವೆ. ಮೊಹಮ್ಮದ್ ರಫೀ ಅವರ ಹಾಡಿನ ಮಾಧುರ್ಯ ಸ್ಮರಣೀಯ. ಪೀಟಿಲುಚೌಡಯ್ಯ, ಪಂಚಾಕ್ಷರಿ ಗವಾಯಿಗಳನ್ನು ಉಲ್ಲೇಖಿಸಿದ ಮಹಾಲಿಂಗಯ್ಯ, ವೈದ್ಯರಿಂದ ಗುಣಪಡಿಸಲಾಗದ ಕೆಲ ಕಾಯಿಲೆಗಳನ್ನು ಸಂಗೀತದಿಂದ ಗುಣಪಡಿಸಬಹುದೆಂಬುದು ಸಾಬೀತಾಗಿದೆ ಎಂದರು.
ಮನಸ್ಸಿಗೆ ತೃಪ್ತಿ, ನೆಮ್ಮದಿ, ಸಮಾಧಾನಗಳು ಸಂಗೀತದಿಂದ ಸಿಗುತ್ತದೆ. ರಚ್ಚೆಹಿಡಿದ ಮಕ್ಕಳೂ ಸಂಗೀತಕ್ಕೆ ತಲೆದೂಗುತ್ತವೆ. ನಿದ್ರಾದೇವಿ ಆಗಮನಕ್ಕೂ ಸಹಕಾರಿ. ಮಳೆ ಸುರಿಸಲು, ಮಳೆ ನಿಲ್ಲಿಸಲು ಸಂಗೀತದಿಂದ ಸಾಧ್ಯವೆಂಬ ಮಾತಿದೆ. ದೀಪ ರಾಗದ ಮೂಲಕ ಜ್ಯೋತಿ ಬೆಳಗಿಸಲಾಗುತ್ತಿತ್ತು ಎಂದು ಸಂಗೀತದ ಪ್ರಾಮುಖ್ಯತೆಯನ್ನು ವಿವರಿಸಿದರು.
ಸಂಗೀತ ಶಿಕ್ಷಕ ಜಯಣ್ಣ ಮತ್ತು ತಬಲಾವಾದಕ ಲೋಕೇಶ್‍ರನ್ನು ಸನ್ಮಾನಿ ಗೌರವಿಸಿದ ಅವರು, ವಿಶಿಷ್ಟಚೇತನರಿಗೆ ಸಂಗೀತ ಹೆಚ್ಚು ಒಲಿಯುತ್ತದೆ. ಮೆದುಳಿನ ಸುತ್ತಳತೆ ಉಳಿದವರಿಗಿಂತ ಅವರಲ್ಲಿ ಒಂದುಸುತ್ತು ಜಾಸ್ತಿ ಎಂದರು.
ಉಸಿರಾಡುವಾಗ ಹೆಸರಿರುತ್ತದೆ. ಸಾಮಾಜಿಕ-ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಉಸಿರು ನಿಂತಮೇಲೂ ಹೆಸರಿರುತ್ತದೆ. ಸ್ವಾಮಿವಿವೇಕಾನಂದ, ಮಹಾತ್ಮಾಗಾಂಧಿ ಮತ್ತಿತರ ಮಹಾಪುರುಷರು ಸಮಾಜಮುಖಿ ಕಾರ್ಯಗಳಿಂದ ಸದಾಸ್ಮರಣೀಯರಾಗಿದ್ದಾರೆ. ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಜನಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ದೇವಿಗುರುಕುಲ ವೇದಮಂತ್ರಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಶ್ರೀದೇವಿಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಪರಿಪೂರ್ಣ ಮನಃಶಾಂತಿ ಸಂಗೀತದಿಂದ ದೊರೆಯುತ್ತದೆ. ಎಂತಹದ್ದೆ ನೋವನ್ನು ಮರೆಸುವ ಶಕ್ತಿ ಸಂಗೀತ ಮತ್ತು ಭಜನೆಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಆಶಾಕಿರಣದ ಸಂಗೀತಶಿಕ್ಷಕ ಜಯಣ್ಣ ಕೀ ಬೋರ್ಡ್ ಪಕ್ಕವಾದ್ಯದೊಂದಿಗೆ ಗಣಪತಿ ಸ್ತುತಿಯಿಂದ ಆರಂಭಿಸಿದ ಗಾಯನ ಸುಧೆ ಹರ್ಷ ಮೂಡಿಸಿತು. ಕುವೆಂಪು ರಚನೆ ಅಶ್ವಥ್ ಸಂಯೋಜನೆಯ ‘ಕಾಣದ ಕಡಲಿಗೆ…, ಕೈಲಾಸಂರ ಕೋಳಿಕೆ ರಂಗಾ.., ಜಿಎಸ್‍ಎಸ್ ಮೇರುಕಾವ್ಯ ಸ್ತ್ರೀ ಅಂದರೆ ಅಷ್ಟೇ ಸಾಕೇ…’ ಮತ್ತಿತರ ಗೀತೆಗಳು ವಿಶೇಷವಾಗಿ ಗಮನ ಸೆಳೆದು ಶ್ರೋತೃಗಳೂ ದನಿಗೂಡಿದರು. ಲೋಕೇಶ್ ತಬಲಾ ಸಾತ್ ನೀಡಿದರು.
ಮಾ.ಸಂ.ಪ್ರ. ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿ ಲೋಕವೇ ನಾದಮಯ ಎಂಬ ಮಾತಿದೆ. ಓಂಕಾರದ ಮೂಲಕವೇ ಜಗತ್ತಿನ ಸೃಷ್ಟಿ. ಚರಾಚರ ವಸ್ತುಗಳು, ಸಸ್ಯ, ಪ್ರಾಣಿ ಸೇರಿದಂತೆ ಸಮಸ್ತ ಜೀವಿಗಳೂ ಸಂಗೀತಕ್ಕೆ ಸ್ಪಂದಿಸುತ್ತವೆ. ಎಲ್ಲವನ್ನೂ ಗೆಲ್ಲುವ ಶಕ್ತಿ ಸಂಗೀತಕ್ಕಿದೆ. ವಿಶ್ವಕ್ಕೆ ಭಾರತದ ಕೊಡುಗೆ ಸಂಗೀತ. ದಕ್ಷಿಣಾದಿ, ಉತ್ತರಾದಿ, ಕರ್ನಾಟಕ ಸಂಗೀತದಲ್ಲಿ ನಮ್ಮ ನಾಡಿನ ಕೊಡುಗೆ ವಿಶಿಷ್ಟವಾಗಿದೆ ಎಂದರು.
ಶ್ರೀಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಸ್ವಾಗತಿಸಿ, ಉಪಾಧ್ಯಕ್ಷರಾದ ಎಸ್.ಶೈಲಾ ಬಸವರಾಜು ಮತ್ತು ಪಾರ್ವತಿಬಸವರಾಜು ರೇಣುಕಗೀತೆ ಹಾಡಿದರು. ಶ್ರೀದೇವಿಗುರುಕುಲ ನಂದಿನಿಶಾಸ್ತ್ರಿ ನಿರೂಪಿಸಿ, ವೇ.ಮೂ.ಶರತ್ ವೇದಘೋಷ ಮಾಡಿದರು. ಶಿಕ್ಷಕಿ ಉಷಾ ವಂದಿಸಿದರು. ಶಿವಮೂರ್ತಿ ವೇದಿಕೆಯಲ್ಲಿದ್ದರು.



