ಪ್ರವಾಸಿಗರು ಸಂಚರಿಸುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ದೇವನ ಗೂಲ್ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೀಕೆಂಡ್ ಹಿನ್ನೆಲೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ 40ಕ್ಕೂ ಹೆಚ್ಚು ಯುವಕ – ಯುವತಿಯರು ನೇತ್ರಾವತಿ ಪೀಕ್ ಟ್ರಕ್ಕಿಂಗ್‍ಗೆ ಬಂದಿದ್ದರು. ಬಾಳೂರು ಕೊಟ್ಟೆಗೆಹಾರ ರಸ್ತೆಯಲ್ಲಿ ದೇವನಗೂಲ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



