IMG-20250801-WA0087(1)

 

 

ರಾಷ್ಟ್ರೀಯತೆಗೆ ಉದಾತ್ತ ಕೊಡುಗೆ ನೀಡಿರುವ ಸ್ವಾಮಿವಿವೇಕಾನಂದರು ಯುವಶಕ್ತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರೆಂದು ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.

ಚಿಕ್ಕಮಗಳೂರು ಕುವೆಂಪು ನಗರದ ಕೆ.ಜೆ.ನಂಜುಂಡಪ್ಪನವರ ಮನೆಯಂಗಳದಲ್ಲಿ ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ26 ರಿಂದ ಆಗಸ್ಟ್24ರ ವರೆಗೆ ಆಯೋಜಿಸಿರುವ ‘ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ‘ಶ್ರಾವಣಮಾಸದ ಪ್ರವಚನ ಮಾಲಿಕೆ’ಯ ಅಂಗವಾಗಿ “ದಿಟ್ಟ ನುಡಿಯ ವೀರ ಸ್ವಾಮಿವಿವೇಕಾನಂದ” ಕುರಿತಂತೆ ಸೋಮವಾರ ಸಂಜೆ ಅವರು ಉಪನ್ಯಾಸ ನೀಡಿ ಸಂವಾದಿಸಿದರು.

ಕಾವಿಧಾರಿಯಾಗಿ ದೇಶಪರ್ಯಟನೆ ಮಾಡಿ ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅದರ ಪರಿಹಾರಕ್ಕೆ ತಮ್ಮದೇ ಸೂತ್ರವನ್ನು ನೀಡಿದ ಸ್ವಾಮಿ ವಿವೇಕಾನಂದರು, ದೀನ-ದಲಿತ-ಪಾಪಿ-ರೋಗಿ-ದರಿದ್ರ ದೇವೋಭವ ಎಂದು ಸಾರಿದ ಪುಣ್ಯಾತ್ಮ. ವೀರವಾಣಿ ಸಿಂಹಘರ್ಜನೆಗೆ ಮತ್ತೊಂದು ಹೆಸರು. ಧ್ಯಾನದ ಮೂಲಕ ಆತ್ಮಬಲ ಉದ್ದೀಪನಕ್ಕೆ ತೊಡಗಿದವರನ್ನು ರಾಮಕೃಷ್ಣ ಪರಮಹಂಸರು ಜನಸಾಮಾನ್ಯರತ್ತ ಮುಖಮಾಡುವಂತೆ ಪ್ರೇರಣೆ ನೀಡಿದವರೆಂದರು.

ರಾಷ್ಟ್ರದ ಘನತೆ, ಭವ್ಯತೆ, ದಿವ್ಯತೆ ನಿಂತಿರುವುದು ಭೌತಿಕ ಬೆಳವಣಿಗೆ ಮೇಲಲ್ಲ, ಬದಲಿಗೆ ಈ ನೆಲದ ಸಾಧು-ಸಂತರ-ಋಷಿಮುನಿಗಳ ಆಧ್ಯಾತ್ಮಿಕ ತಪಶಕ್ತಿಯ ಮೇಲೆ ಎಂದು ಜಗತ್ತಿಗೆ ತೋರಿಸಿ ಕೊಟ್ಟವರು. ಸಾತ್ವಿಕಧನಾತ್ಮಕ ಗುಣಗಳಿಂದ ಬೆಳೆದು ಹಿಂದೂಧರ್ಮ ಸನಾತನತೆಯನ್ನು ಪ್ರಪಂಚಕ್ಕೆ ಸಮರ್ಥವಾಗಿ ಪರಿಚಯಿಸಿದ ಧೀರ ಸನ್ಯಾಸಿ ಎಂದು ಬಣ್ಣಿಸಿದರು.

ಉತ್ತರಾಯಣ ಪುಣ್ಯಸಂಧಿಕಾಲ ಸೂರ್ಯ ದಿಕ್ಕುಬದಲಿಸುವ ಜನವರಿ-14ರ ಸಂಕ್ರಮಣ ಸಂದರ್ಭದಲ್ಲಿ ಬಂಗಾಳದ ವಿಶ್ವನಾಥದತ್ತ ಮತ್ತು ಭುವನೇಶ್ವರಿ ಎರಡು ಪರಮತತ್ತ್ವಗಳಿಗೆ ಹುಟ್ಟಿದ ಪರಮೋಚ್ಛತತ್ತ್ವವೇ ನರೇಂದ್ರ. ಬಾಲ್ಯದಲ್ಲೆ ಆಧ್ಯಾತ್ಮದ ಒಲವು-ನಿಲವು ಹೊಂದಿದ ಬಾಲಕ ಟಾಂಗಾವಾಲ ಆಗುವ ಆಶಯ ವ್ಯಕ್ತಪಡಿಸಿದಾಗ ತಂದೆ ವಿಶ್ವನಾಥದತ್ತರು ಆರುಕುದುರೆಗಳ ರಥವನ್ನು ಓಡಿಸುವ ಕೃಷ್ಣನನ್ನು ತೋರಿಸಿ ಇಂತಹ ಸಾರಥಿಯಾಗು ಎಂದು ಹೇಳಿದಂತೆ ಮುಂದೆ ವಿವೇಕಾನಂದರಾಗಿ ಸನಾತನತೆಯ ಸಾರಥಿಯಾದರು ಎಂದು ಮಹೇಶ್ ಬಣ್ಣಿಸಿದರು.

ಕ್ರೈಸ್ತರ ನೆಲದಲ್ಲಿ ನಿಂತು ಹಿಂದೂಧರ್ಮದ ನಿಜ ಗರಿಮೆಯನ್ನು ಧೈರ್ಯವಾಗಿ ಅನಾವರಣಗೊಳಿಸಿದರು. ಚಿಕಾಗೋ ವಿಶ್ವಧರ್ಮಸಮ್ಮೇಳನದಲ್ಲಿ ಸಹೋದರ-ಸಹೋದರಿಯರೆಂಬ ನಿಜ ಭ್ರಾತೃತ್ವದ ಪ್ರೀತಿಯ ಮಾತುಗಳಿಂದ ಗಮನಸೆಳದು ಕೇವಲ ಮೂರುಮುಕ್ಕಾಲು ನಿಮಿಷಗಳ ಭಾಷಣದೊಂದಿಗೆ ಜಗತ್ತಿನ ಧಾರ್ಮಿಕ ಪ್ರಪಂಚದ ಛಾಯಂಪಿಯನ್ ಆಗಿ ವಿವೇಕಾನಂದ ಹೊರಹೊಮ್ಮಿದರೆಂದು ಅವರ ಶಿಷ್ಯೆ ಅನಿಬೆಸೆಂಟ್ ವ್ಯಾಖ್ಯಾನಿಸಿದ್ದನ್ನು ಉಲ್ಲೇಖಿಸಿದ ಮಹೇಶ್, ಎಂಟು ವಿವಿಧ ಧರ್ಮಿಯರು ಪಾಲ್ಗೊಂಡಿದ್ದ ಸಮ್ಮೇಳನದಲ್ಲಿ ಹಿಂದೂಧರ್ಮದ ಸಾರಸತ್ವನ್ನು ಎತ್ತಿಹಿಡಿದವರೆಂದರು.

ಆಧ್ಯಾತ್ಮಿಕಶಕ್ತಿಯ ಪ್ರತೀಕ ಯುವಶಕ್ತಿ. ಬದುಕು ಭವ್ಯ-ದಿವ್ಯವಾಗಬೇಕಾದರೆ ಅದು ಸವೆಯಬೇಕು, ತುಕ್ಕು ಹಿಡಿಯಬಾರದು ಎಂದಿದ್ದ ಸ್ವಾಮಿ ವಿವೇಕಾನಂದರು, ಜೆ.ಆರ್.ಟಾಟಾ ಅವರನ್ನು ಪ್ರಭಾವಿಸಿ ಭಾರತದಲ್ಲಿ ಕೈಗಾರಿಕೆಸ್ಥಾಪನೆ, ವಿಜ್ಞಾನದ ಸಂಶೋಧನೆಗೆ ಕಾರಣೀಭೂತರಾಗಿ ಲಕ್ಷಾಂತರ ಯುವಕರ ಕೈಗೆ ಕೆಲಸ ಸಿಗುವಂತೆ ಮಾಡಿದವರೆಂದರು.

ಭಾರತದ ಭವ್ಯತೆ ಮತ್ತು ದಿವ್ಯತೆ ಅರಿಯಲು ವಿವೇಕಾನಂದರನ್ನು ಓದಿ ಎಂದು ರವೀಂದ್ರನಾಥ ಠ್ಯಾಗೂರ್ ಹೇಳಿದ್ದರೆ, ದೇಶದ ಆತ್ಮಶಕ್ತಿಯ ಒಟ್ಟು ಮೊತ್ತ ವಿವೇಕ ಎಂದವರು ಅರವಿಂದರು. ದೇಶಾಭಿಮಾನಕ್ಕೆ ಸ್ಫೂರ್ತಿ ವಿವೇಕಾನಂದ ಎಂದು ಗಾಂದಿ üಬಣ್ಣಿಸಿದರೆ, ದೇಶದ ಆತ್ಮಶಕ್ತಿ ಒಗ್ಗೂಡಿಸಿದ್ದು ವಿವೇಕವಾಣಿ ಎಂದು ಸುಭಾಷ್‍ಚಂದ್ರಬೋಸ್ ನಂಬಿದ್ದರೆಂದು ನುಡಿದ ಚಟ್ನಳ್ಳಿಮಹೇಶ್, ಸ್ವಾಮಿ ವಿವೇಕಾನಂದರ ಧೀಶಕ್ತಿ ನೆನಪಿಸುವುದು ಸಾಂಸ್ಕøತಿಕ ಕಂಪನವೆಂದರು.

ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ನಂಜುಂಡಪ್ಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ವಿವೇಕ, ರಾಮಕೃಷ್ಣಪರಮಹಂಸರು, ಶಾರದಾದೇವಿ ತ್ರಿಮೂರ್ತಿಗಳು ಭಾರತದ ಅಷ್ಟೇ ಅಲ್ಲ ಜಗತ್ತಿನ ಆಧ್ಯಾತ್ಮಿಕ ನಾಯಕರಾಗಿ ಮನುಕುಲದ ಕಲ್ಯಾಣಕ್ಕೆ ಕಾರಣೀಭೂರಾಗಿದ್ದಾರೆಂದರು.

ನಗರಸಭಾ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮಾ.ಸಂ.ಪ್ರ.ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಐಸಿರಿ ಫೌಂಡೇಶನ ಅಧ್ಯಕ್ಷ ರೋಹನಭಾರ್ಗವಪುರಿ ನಿರೂಪಿಸಿ ಪ್ರಾಯೋಜಕರನ್ನು ಸನ್ನಾನಿಸಿದರು. ಅಭಾಸಾಪದ ಪ್ರಶಾಂತಹೊಳೆಹೊನ್ನೂರು, ಪ್ರೊ.ನಾಗೇಶ್‍ಕಡೂರ್, ವಿನಾಯಕ, ಭುವನೇಶ್ವರಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವರದಿ : ಪ್ರಭುಲಿಂಗಶಾಸ್ತ್ರಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ