ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಅಂತರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್ 22 ರಂದು ಮಂತ್ರಾಲಯದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಗಡಿನಾಡ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು ಕಸಾಪ ಜಿಲ್ಲಾ ಘಟಕಗಳು ಒಳಗೊಂಡಂತೆ ಕ.ಸಾ.ಪ. ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಅವರನ್ನು ಆಯ್ಕೆಮಾಡಲಾಗಿದೆ. ಮಂತ್ರಾಲಯ ಪೀಠದ ಶ್ರೀ ಸುಭುದೇಂದ್ರ ತೀರ್ಥರು ಸಾನಿಧ್ಯ ವಹಿಸಲಿದ್ದು, ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ನಾಡೋಜ ಡಾ.ಮಹೇಶ್‌ಜೋಷಿ ಅವರು ನೆರವೇರಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿಯನ್ನು ಡಾ. ಬಿ.ಎಂ. ಪಟೇಲ್ ಪಾಂಡು ಮತ್ತು ಮದನ್‌ಗೌಡ ಇವರು ನೆರವೇರಿಸಲಿದ್ದು, ತೆಲಂಗಾಣ ಗಡಿನಾಡು ಜಿಲ್ಲೆಯ ಘಟಕದ ಅಧ್ಯಕ್ಷ ಡಾ. ಗುಡಗುಂಟಿ ವಿಠಲ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಆದ ನಾನು ಆಶಯ ನುಡಿಗಳನ್ನಾಡಲಿದ್ದೇನೆ ಎಂದು ಹೇಳಿದರು.
ಕಸಾಪ ಕೋಶಾಧ್ಯಕ್ಷ ಡಿ.ಆರ್.ವಿಜಯ್‌ಕುಮಾರ್, ಅಂಜನ್‌ಕುಮಾರ್, ಸೋಮಶೇಖರ್ ಜಮಕಟ್ಟಿ, ಡಾ. ಸಿದ್ದಣ್ಣ ಸಂಗಪ್ಪ ಮೇಟಿ ಭಾಗವಹಿಸಲಿದ್ದಾರೆ ಎಂದರು.
ಗಡಿನಾಡು ಕನ್ನಡಿಗರ ಕೊಡುಗೆ ಎಂಬ ಗೋಷ್ಠಿ ಅಂದು ಬೆಳಗ್ಗೆ ಆರಂಭವಾಗಲಿದ್ದು, ತೆಲಂಗಾಣ ಹಿರಿಯ ಸಾಹಿತಿ ಅಮರ ದೀಕ್ಷಿತ್ ಪ್ರವೇಶ ನುಡಿಯನ್ನಾಡಲಿದ್ದಾರೆ. ಸಾಹಿತಿ ಕಿಶನ್ ರಾವ್ ಅಧ್ಯಕತೆ ವಹಿಸಲಿದ್ದಾರೆ. ಸಾಹಿತಿ ಧರ್ಮೇಂದ್ರ ಪೂಜಾರಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕುಮಾರವ್ಯಾಸ ಕಥಾ ಪ್ರಸಂಗದ ಗಮಕ ಗೋಷ್ಟಿ ಎರಡನೆ ಅವಯಲ್ಲಿ ಆರಂಭವಾಗಲಿದ್ದು ಚಂದ್ರಕಲಾ ಕೊಪ್ಪ ಗೋಷ್ಠಿ ಉದ್ಘಾಟಿಸಲಿದ್ದಾರೆ. ತರೀಕೆರೆಯ ಸುನಿತಕಿರಣ್ ಗಮಕ ವಾಚಿಸಲಿದ್ದಾರೆ. ರಾಮಸುಬ್ರಾಯಶೇಟ್ ವ್ಯಾಖ್ಯಾನ ಮಾಡಲಿದ್ದಾರೆ ಎಂದರು.
ಮೂರನೇ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತೆಲಂಗಾಣದ ಸಾಹಿತಿ ಚಂದಕ ಚರ್ಲಾ ರಮೇಶ್ ಬಾಬು ವಹಿಸಲಿದ್ದು , ಡಾ.ಮುನಿಸ್ವಾಮಿ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಡಾ. ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಾಗುವುದು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 5 ರಾಜ್ಯಗಳ ಸಾಧಕರನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಮೇಶ್‌ಬೇಗಾರ್, ಗಿರಿಯಾಚಾರ್ಯ, ತಾರಾಮತಿ ಕುಲಕರ್ಣಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ, ಹೋಬಳಿ ಅಧ್ಯಕ್ಷೆ ವೀಣಾ, ಸಚಿನ್‌ಸಿಂಗ್, ಸಂದೀಪ್. ಟಿ, ರಾಜೇಶ್ ಇದ್ದರು.



