ಮಂಡ್ಯ ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಮಸೀದಿಯಿಂದಲೇ ಲೈಟ್ ಆಫ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ. ಬೀದಿಗಳಲ್ಲಿ ಮೆರವಣಿಗೆ ಮೂಲಕ ಗಣಪನನ್ನು ತರುವ ವೇಳೆ ಮಸೀದಿ ಮುಂದೆ ಹಾದುಹೋಗಬೇಕೆನ್ನುವಷ್ಟರಲ್ಲಿ, ದಿಢೀರ್ ಲೈಟ್ ಆಫ್ ಆಗಿದೆ. ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳನ್ನು ಕೂಡ ಎಸೆದಿದ್ದಾರೆ ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ.
ಘಟನೆಯಲ್ಲಿ 15 ಯುವಕರು ಮತ್ತು 10 ಪೊಲೀಸರು ಗಾಯಗೊಂಡಿದ್ದಾರೆ. ಕಲ್ಲು ತೂರಾಟ ವಿರೋಧಿಸಿ ಸೋಮವಾರ ಮಹಿಳೆಯರು-ಮಕ್ಕಳು ಸೇರಿದಂತೆ ಸಾವಿರಾರೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಇದರಿಂದ ಮದ್ದೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ರೂಪುಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇಂದು ಮದ್ದೂರ್ ಬಂಧ್ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ.
ಪ್ರಕರಣ ಸಂಬಂಧ ಕಲ್ಲು ತೂರಿದ್ದ 21 ಮಂದಿ ಮುಸ್ಲೀಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅವರಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.



