ಕವಿತೆ ಎಂಬುದು ಆತ್ಮದ ಸಂಗಾತಿ. ಅದು ಲೋಕಕ್ಕೆ ಸಾರಬೇಕೆಂದರೆ ಕವಿಗೋಷ್ಠಿಯಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದು ಸಾಂಸ್ಕøತಿಕ ಚಿಂತಕ, ಕನ್ನಡ ಉಪನ್ಯಾಸಕ ಡಾ.ಹೆಚ್.ಎಸ್.ಸತ್ಯನಾರಾಯಣ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಜಿಲ್ಲಾ ಕಸಾಪ ಮಹಿಳಾ ಘಟಕದಿಂದ ದಸರಾ ಸಂಭ್ರಮ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.
ಹಿಂದೆ ಈ ನಾಡಿನಲ್ಲಿ ದಲಿತ ಬಂಡಾಯ ಸಾಹಿತ್ಯ ನೆಲೆಯೂರಿತ್ತು. ಮಹಿಳೆಯರು ಹೊರಗಡೆಯ ಕಲೆ ಪ್ರಕಾರಗಳ ಬಗ್ಗೆ ಅರಿತುಕೊಳ್ಳಲು ಹಿಂದಿನಿಂದಲೂ ಸಮಾಜ ವಿರೋಧಿಸುತ್ತಾ ಬಂದಿತ್ತು. ಇಂತಹ ಸ್ಥಿತಿಯಲ್ಲಿ 70ರ ದಶಕದಲ್ಲಿ ಅನೇಕ ಮಹಿಳಾ ಕವಿಯತ್ರಿಗಳು ಕಥೆ, ಕವನ ಬರೆಯಲು ಪ್ರಾರಂಭಿಸಿದರು. ಕವಿತೆ ಬರೆಯಲು ದೊಡ್ಡ ರೂಪಕ ಬೇಕಾಗಿಲ್ಲ. ತನ್ನ ಭಾವನೆಗಳನ್ನು ಸರಳವಾಗಿ ಬರೆಯಬಹುದೆಂದು ಹಿರಿಯ ಮಹಿಳಾ ಸಾಹಿತಿಗಳು ತೋರಿಸಿಕೊಟ್ಟರು. ಈ ಮೂಲಕ ಮಹಿಳಾ ಕವಿಗಳು ಅಧಿಕಗೊಳ್ಳತೊಡಗಿತು. ಅದನ್ನು ಮುಂದುವರಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಈಗಿನ ಮಹಿಳಾ ಸಾಹಿತಿಗಳಾಗಿದೆ. ಈ ನಿಟ್ಟಿನಲ್ಲಿ ಕವಿಗೋಷ್ಠಿಗಳು ಪ್ರೇರಣ ಶಕ್ತಿಯಾಗಿವೆ ಎಂದರು.
ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ; ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದುವುದರ ಜತೆಗೆ ಅಧ್ಯಯನ ಶೀಲರಾದಾಗ ಮಾತ್ರ ನಮ್ಮಿಂದ ಗುಣಮಟ್ಟದ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದರು. ಹೊರ ಜಿಲ್ಲೆ ಹೋಲಿಕೆ ಮಾಡಿದರೆ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರಹಗಾರರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಜ್ಞಾನ ಸಂಪಾದನೆಗೆ ಕಾವ್ಮ ಕಮ್ಮಟ, ಕಥಾ ಕಮ್ಮಟ ಹಾಗೂ ವಿಚಾರ ಸಂಕೀರ್ಣ ಆಯೋಜಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಕವನಗಳನ್ನು ಸಂಗ್ರಹಿಸಿ ಸಹಕಾರ ತತ್ವದ ಅಡಿಯಲ್ಲಿ ಸಂಕಲನ ಬಿಡುಗಡೆ ಮಾಡುವುದು, ಇಡೀ ಜಿಲ್ಲೆಯ ಎಲ್ಲಾ ಲೇಖಕರ ಕೈಪಿಡಿ ತರಲು ಹೊಸ ಚಿಂತನೆ ನಡೆಸಲಾಗಿದೆ.
ಜಿಲ್ಲೆಯಲ್ಲಿ ಕಸಾಪ ಮಹಿಳಾ ಘಟಕ ಸ್ಥಾಪಿಸಿದ್ದರಿಂದ ಸಾಹಿತ್ಯ ಚಟುವಟಿಕೆಗಳಲ್ಲಿ ಹತ್ತು ಹೆಜ್ಜೆ ಮುಂದೆ ಹೋಗಿದ್ದೇವೆ. ಅಲ್ಲದೇ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಯುವ ಘಟಕ ಪ್ರಾರಂಭಿಸಿದ್ದರಿಂದ ಕ್ರೀಯಾಶೀಲತೆಯಿಂದ ಕನ್ನಡ ಕಟ್ಟುವ ಕೆಲಸವಾಗುತ್ತಿದೆ. ಜನವರಿಯಲ್ಲಿ ದೂರದರ್ಶನದ ಕವಿಗೋಷ್ಠಿ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಬಳಿಕ ಜಿಲ್ಲೆಯಾಧ್ಯಂತದಿಂದ ಆಗಮಿಸಿದ್ದ ಮಹಿಳಾ ಕವಿಯತ್ರಿಗಳು ಕವನ ವಾಚಿಸಿದರು. ಸಾಹಿತಿ ಎಸ್.ಎನ್.ಚಂದ್ರಕಲಾ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಮೂಡಿಗೆರೆ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರವಿರಾಜ್ ಮಾತನಾಡಿದರು.
ಜ್ಯೋತಿ ವೆಂಕಟೇಶ್, ಅಶ್ವಿನಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು, ಬಕ್ಕಿ ಮಂಜುನಾಥ್, ಸುಚಿತ್ರ ಪ್ರಸನ್ನ, ಅಶ್ವಿನಿ ಸಂತೋಷ್ ನಾಡಗೀತೆ ಮತ್ತು ರೈತಗೀತೆ ಹಾಡಿದರು, ವಿಶಾಲ ನಾಗರಾಜ್ ಸ್ವಾಗತಿಸಿ, ಸುಚಿತ ಗಣೇಶ್ ವಂದಿಸಿದರು.



