ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಶುಕ್ರವಾರ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಹೆಸಗಲ್ ಗ್ರಾ.ಪಂ. ಮಾಜಿ ಸದಸ್ಯ ಗಿರೀಶ್ ಹೆಸಗಲ್ ಮಾತನಾಡಿ, ಹೆಸಗಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 2018ರಲ್ಲಿ 600ಕ್ಕೂ ಅಧಿಕ ಕುಟುಂಬ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 30 ವರ್ಷದಿಂದ ಇದೂವರೆಗೂ ನಿವೇಶನ ನೀಡಿಲ್ಲ. ಇತ್ತೀಚೆಗೆ ಹೆಸಗಲ್ ಗ್ರಾಮದ ಕೊಲ್ಲಿಬೈಲ್ ಬಳಿ ಸುಮಾರು 40 ಎಕರೆಗೂ ಅಧಿಕ ಸರಕಾರಿ ಹಾಗೂ ಗೋಮಾಳ ಭೂಮಿ ಇದೆ ಎಂದು ತಿಳಿದು ಬಂದಿದೆ. ಈ ಜಾಗವನ್ನು ನಿವೇಶನ ರಹಿತರಿಗೆ ಮೀಸಲಿರಿಸಬೇಕೆಂದು ಒತ್ತಾಯಿಸಿದರು.

ಹೆಸಗಲ್ ಗ್ರಾ.ಪಂ. ಸದಸ್ಯ ಶಿವಣ್ಣ ಮಾತನಾಡಿ, ಈಗಾಗಲೇ 40 ಎಕರೆ ಸರಕಾರಿ ಜಾಗದಲ್ಲಿ ಪ.ಪಂ.ಗೆ 5 ಎಕರೆ ಭೂಮಿ ಮೀಸಲಿರಿಸಿರುವ ಬಗ್ಗೆ ಮಾಹಿತಿ ಬಂದಿದೆ. ಸಾರ್ವಜನಿಕರ ಅಭಿವೃದ್ಧಿಗೆ ಭೂಮಿ ಮೀಸಲಿರಿಸಿರುವುದು ನಮ್ಮ ತಕರಾರು ಇಲ್ಲ. ಆದರೆ ಮೊದಲು ನಿವೇಶನಕ್ಕಾಗಿ ಭೂಮಿ ಮೀಸಲಿರಿಸಬೇಕು. 94ಸಿ ಅರ್ಜಿ ಕೂಡಲೇ ವಿಲೆ ಮಾಡಬೇಕು. ಹೆಸಗಲ್ ಕಾಲೋನಿಯಲ್ಲಿ ಸರ್ವೇ ನಂ 3/1ರಲ್ಲಿ 4.30 ಎಕರೆ ಜಮೀನಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ 60ಕ್ಕೂ ಅಧಿಕ ಕುಟುಂಬಕ್ಕೆ ಹಕ್ಕುಪತ್ರ ನೀಡಬೇಕು. ಡಿಸಿ ಹಾಗೂ ಎಸಿ ಸ್ಥಳಕ್ಕೆ ಬಂದು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡುವವರೆಗೂ ಮುಷ್ಕರ ಮುಂದುವರೆಯವುದೆಂದು ಹೇಳಿದರು.
ಹೆಸಗಲ್ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಬಿಳಗುಳ, ಅಶೋಕ್, ಪೂರ್ಣೇಶ್, ಮಾಜಿ ಸದಸ್ಯರಾದ ಕಾಮಾಕ್ಷಿ, ಮೊಹಮ್ಮದ್, ಕಲ್ಲೇಶ್ ಸೇರಿದಂತೆ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಉಪಸ್ಥಿತರಿದ್ದರು.
ಈ ನಡುವೆ ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಿರತರ ಜೊತೆ ಮಾತುಕತೆ ನಡೆಸಿದರು. ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ 10 ಎಕರೆ ಭೂಮಿಯನ್ನು ನಿವೇಶನ ರೈತರಿಗೆ ನೀಡಲು ರಮವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿ ಮುಷ್ಕರವನ್ನು ಹಿಂಪಡೆಯಲಾಗಿದೆ.



