ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಬದಲಾವಣೆಯಾಗಿ, ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತೇರ್ಗಡೆ ಅಂಕಗಳನ್ನು ಕಡಿತಗೊಳಿಸಿದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಅಂಕಗಳನ್ನು 35 ರಿಂದ 33 ಕ್ಕೆ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು 35 ರಿಂದ 30 ಕ್ಕೆ ಇಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು 35ರಿಂದ 33 ಮತ್ತು 30ಕ್ಕೆ ಇಳಿಸಿದ್ದೇವೆ. ನಾವು ಉತ್ತೀರ್ಣತೆಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು, ಸಿಬಿಎಸ್‌ಇ ಮತ್ತು ಇತರ ಮಂಡಳಿಗಳಿಗೆ ಹೊಂದಿಕೆಯಾಗುವ ಏಕರೂಪ ವ್ಯವಸ್ಥೆಯನ್ನು ಪರಿಚಯಿಸಲು ಬಯಸುತ್ತೇವೆ ಎಂದಿದ್ದರು.
ಕರಡು ನಿಯಮಗಳ ಅಧಿಸೂಚನೆಯನ್ನು ಗೆಜೆಟ್‌ನಲ್ಲಿ ಹೊರಡಿಸಲಾಗಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಒಟ್ಟಾರೆಯಾಗಿ, ಅಧಿಸೂಚನೆಯನ್ನು ಬೆಂಬಲಿಸಿ 701 ಪತ್ರಗಳು ಬಂದಿದ್ದು, ಅದನ್ನು ವಿರೋಧಿಸಿ ಕೇವಲ ಎಂಟು ಪತ್ರಗಳು ಬಂದಿವೆ. ತಿದ್ದುಪಡಿ ಮಾಡಿದ ನಿಯಮಗಳನ್ನು ಈ ವರ್ಷವೇ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4 ನೇ ವರದಿಯು ಸಹ SSLC ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. SSLC ವಿದ್ಯಾರ್ಥಿಯು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡರಲ್ಲೂ ಒಟ್ಟಾರೆಯಾಗಿ ಶೇಕಡಾ 33ರಷ್ಟು ಗಳಿಸಿದರೆ ಮತ್ತು ಒಟ್ಟು 625 ರಲ್ಲಿ ಕನಿಷ್ಠ 206 ಅಂಕಗಳನ್ನು ಪಡೆದರೆ ಮತ್ತು ಆಯಾ ವಿಷಯಗಳಲ್ಲಿ ಕನಿಷ್ಠ 30 ಅಂಕಗಳನ್ನು ಪಡೆದರೆ, ಅಭ್ಯರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದಿದ್ದಾರೆ.



