jeeval 1

 

 

ಧನಂಜಯ ಜೀವಾಳರವರು ಕನ್ನಡದಲಿ ಬರೆದಿದ್ದ “ತೇಜಸ್ವಿ ನನಗೆ ನಿಮಿತ್ತ” ಪುಸ್ತಕದ ಇಂಗ್ಲೀಷ್ ಆವೃತ್ತಿ ‘NIMITHTHA’ ಇತ್ತೀಚೆಗೆ ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು.

ಸಾವಿರಾರು ಓದುಗರ ಮನಸೂರೆಗೊಂಡು ಟಾಪ್ ಟೆನ್ ಪುಸ್ತಕಗಳ ಪಟ್ಚಿಯಲ್ಲಿ ಹಲವಾರು ತಿಂಗಳುಗಳ ಕಾಲ ಸ್ಥಾನ ಪಡೆದಿದ್ದ ಕಾಡಿನ ಸಂತ ತೇಜಸ್ವಿಯವರ ಬದುಕಿನ ಹಲವಾರು ಮಜಲುಗಳ ಅನಾವರಣ ಮಾಡಿದ್ದ ‘ತೇಜಸ್ವಿ ನನಗೆ ನಿಮಿತ್ತ’ ಕನ್ನಡ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ಯುವ ಅನುವಾದಕಿ ಕುಮಾರಿ ಮಿಂಚುರವರು ತರ್ಜುಮೆ ಮಾಡಿದ್ದಾರೆ.

ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ತೇಜಸ್ವಿಯವರ ಬಗೆಗೆ ತಿಳಿಯಲು ಬಹು ದಿನಗಳಿಂದ ಕಾಯುತಿದ್ದ ನೂರಾರು ಜನರು ಈ ಪುಸ್ತಕದ ಮೂಲಕ ತಮ್ಮ ಕುತೂಹಲವನ್ನು ತಣಿಸಿಕೊಡಲು ಪ್ರಕಾಶಕ ಸಂಸ್ಥೆ “ಟೋಟಲ್ ಕನ್ನಡ” ಈ ವಿಭಿನ್ನ ಹೆಜ್ಜೆಯನ್ನಿರಿಸಿದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಕೃಷಿ ವಿಜ್ಞಾನಿ ಮತ್ತು ಕನ್ನಡದ ಡಾನ್ ಬ್ರೌನ್ ಎಂದೇ ಖ್ಯಾತರಾದ ಸಾಹಿತಿ ಡಾ. ಕೆ.ಎನ್.ಗಣೇಶಯ್ಯ,
ಕನ್ನಡಪರ ಚಿಂತಕರಾದ ಕೆ. ರಾಜಕುಮಾರ್ ಹಾಗೂ ಹಿರಿಯ ಸಾಹಿತಿಗಳಾದ ಡಾ. ಕೆ.ಸತ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು.

“ಓದುಗರಿದ್ದಾರೆಂಬ ಪ್ರಜ್ಞೆಯಿಂದಲೇ ಬರೆಯಬೇಕೆಂದು ಬರಹಗಾರರನು ಎಚ್ಚರಿಸುತಿದ್ದ ತೇಜಸ್ವಿ ತಮ್ಮ ವಿಭಿನ್ನ ನಿರೂಪಣಾ ಶೈಲಿಯಿಂದ ಅಪಾರ ಓದುಗ ಬಳಗವನ್ನು ಹೊಂದಿದ್ದಾರೆ. ಸಮಾಜದ ವೈವಿಧ್ಯತೆಯನ್ನು ಪ್ರಶಂಸಿಸುತ್ತಲೇ ಸಹಜವಾದ ವೈರುದ್ಧತೆಗಳನು ಗಮನಿಸುತ್ತ ಬರಹವನು ಮಾಡಿದ್ದ ತೇಜಸ್ವಿಯವರು ಸಾಮರಸ್ಯದ ಕುರಿತು ಹಿಂದಿನಿಂದಲೂ ವಿಭಿನ್ನ ದೃಷ್ಠಿಕೋನ ಹೊಂದಿದ್ದರು.

ಎಷ್ಟನ್ನು ನಾವು ಕಣ್ಣಿಗೆ ಕಂಡರೂ ನೋಡದೇ ಬಿಟ್ಟಿದ್ದೇವೋ ಎಂದಿರುವ ತೇಜಸ್ವಿಯವರ ಮಾತನ್ನು ನೆನಪಿಸುತ್ತಾ, ಚಿದಂಬರ ರಹಸ್ಯದ ರಫಿ-ಜಯಂತಿ ಪ್ರಕರಣ ಹಾಗೂ ಡೇರ್ ಡೆವಿಲ್ ನ ರಮಾಮಣಿ-ಮುಸ್ತಫಾ ಪ್ರಕರಣವನ್ನು ಉಲ್ಲೇಖಿಸಿ, ಸರಿಸುಮಾರು ಮೂರು ತಲೆಮಾರಿನ ಆಲೋಚನೆಯನು ಪ್ರಭಾವಿಸಿದ ತೇಜಸ್ವಿ ಆನಂತರದಲ್ಲಿ ಆಗಿಹೋಗಿರುವ ಸ್ಥಿತ್ಯಂತರಗಳನು ಗಮನಿಸಿದ್ದರೆ ಬರಹದ ರೂಪದ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳುತಿದ್ದರೇನೋ?” ಎಂದು ಅಭಿಪ್ರಾಯಪಟ್ಟ ಮೂಲಕೃತಿಯನು ರಚಿಸಿದ ಧನಂಜಯ ಜೀವಾಳರು “ಕುವೆಂಪುರವರ ಕೃತಿಯಲ್ಲಿ ಬರುವ ಹಾಗೂ ಕಂದಾಚಾರವನು ಮೆಟ್ಟಿ ನಿಲ್ಲುವ, ‘ಯಾರು ಹೇಳಿದ ಮಾತಿಲ್ಲಿ ನಿಗಧಿ?’ಎಂಬ ಸಾಲನ್ನು ಉಲ್ಲೇಖಿಸಿ, ತೇಜಸ್ವಿಯವರ “ನಾನೂ ನಿಮ್ಮ ಹಾಗೇ ಹೊಟ್ಟೆಗೆ ಅನ್ನ ತಿನ್ನುವ ನರಮನುಷ್ಯ ಕಣ್ರಯ್ಯ. ಯಾರ-ಯಾವ ಅಭಿಪ್ರಾಯಗಳೂ ಅಂತಿಮವಲ್ಲ, ಅವು ಸಂದರ್ಭಾನುಸಾರ ಬದಲಾಗುತ್ತಿರುತ್ತವೆ” ಎಂಬುದನ್ನು ವಿಶ್ಲೇಷಣೆಗೊಳಪಡಿಸಿದರು.

“ಲೇಖಕನ ಬರಹವು ನೂರಾರು ಓದುಗರ ಅಭಿಪ್ರಾಯವನು ರೂಪಿಸುವ ಕಾರಣ ತಾನು ಓದಿದ ಲೇಖಕನ ಬರಹವನು ಮೆಚ್ಚಬೇಕಾದಲ್ಲಿ ಮೆಚ್ಚಿ, ವಿಮರ್ಶೆ ಮಾಡಬೇಕಿದ್ದಲ್ಲಿ ವಿಮರ್ಶಿಸುವ ಸಮಚಿತ್ತತೆಯನು ವಾಚಿಕನು ಮೈಗೂಡಿಸಿಕೊಳ್ಳುವ ಅಗತ್ಯವಿದೆ” ಎಂದರು.

ಪುಸ್ತಕವನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಗಣೇಶಯ್ಯನವರು “ಕುವೆಂಪುರವರ ಪ್ರಭಾವಲಯದಿಂದ ಬಿಡುಗಡೆ ಹೊಂದಲೆಂದೇ ಮೂಡಿಗೆರೆಯೆಂಬ ಅಷ್ಟೇನೂ ಜಂಗುಳಿಯಿಲ್ಲದೆಡೆಯನು ಸೇರಿಕೊಂಡಿರಬಹುದು.

ರಾಮಾಯಣವೆಂಬ ಪೌರಾಣಿಕ ಐತಿಹ್ಯವು ತೇಜಸ್ವಿಯವರ ಬದುಕನ್ನು ಹಂತಹಂತಗಳಲ್ಲೂ ಪ್ರಭಾವಿಸಿರುವುದನು ಅಯೋಧ್ಯೆಯನು ಹೋಲುವ ಮೈಸೂರನು ತೊರೆದು, ಮೂಡಿಗೆರೆಯೆಂಬ ಮಲೆನಾಡಿನ ಮಡಿಲಿನ ವನವನ್ನು ತನ್ನ ಆವಾಸವನ್ನಾಗಿಸಿಕೊಂಡದ್ದು ಮತ್ತು ಆ ವನದ ಮುಖಾಂತರವೇ ಬದುಕನ್ನು, ಜಗತ್ತನ್ನು ಅನ್ವೇಷಿಸಿದ್ದೊಂದು ಕನ್ನಡದ ಮಟ್ಟಿಗೆ ಅಪೂರ್ವವಾದ ಪ್ರಯೋಗವೇ ಸರಿ“ ಎಂದು ಅವಲೋಕಿಸಿದರು.

ನಂತರ ಮಾತನಾಡಿದ ಹಿರಿಯ ಸಾಹಿತಿಗಳಾದ ಡಾ. ಕೆ.ಸತ್ಯನಾರಾಯಣರವರು ಪುಸ್ತಕದಲಿ ಪ್ರಸ್ತಾಪವಾಗಿರುವ ತೇಜಸ್ವಿ ಹಾಗೂ ಮೂಲ ಲೇಖಕ ಧನಂಜಯ ಜೀವಾಳರ ನಡುವಿನ ಒಡನಾಟದ ಸಂದರ್ಭಗಳಾದ
1. ಹ್ಯಾಂಡ್ಸ್ ಅಪ್ 2. ಹೊಯ್ಸಳನ ಹೆಸರಿಗೆ ಮಸಿ 3. ವಿಸ್ಮಯ ಪ್ರತಿಷ್ಠಾನದ ಮೂಲ ಪರಿಕಲ್ಪನೆ 4. ನಮಸ್ಕಾರಾ ಸಾರ್ 5. ರನ್ನಿಂಗ್ ಕಾಮೆಂಟರಿ
6. ಬಚಾವಾದೆ ಮಾರಾಯ 7. ಆಹಾ ನನ್ನ ಮದುವೆಯಂತೆ  8. ಭಯಾನಕ ಸತ್ಯ  9. ಸೂರ್ಯಂಗೇ ಟಾರ್ಚು 10. ಸೋಲಲೇಬೇಕಾದ ಯುದ್ಧ
11. ಹಿಂದಿನ ಸಾಲಿನ ಮೂಲೆಯ ಖುರ್ಚಿ 12. ಉಸ್ಕೋ ಪಕ್ಡೋ ಮುಂತಾದುವನ್ನು ಬಹು ಸ್ವಾರಸ್ಯಕರವಾಗಿ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಪರ ಚಿಂತಕರಾದ ಕೆ. ರಾಜಕುಮಾರ್ ರವರು “ತೇಜಸ್ವಿಯವರನ್ನು ಪಥ ಪಂಥಗಳೆನ್ನದೆ , ಅವರನ್ನು ಹೊಸ ಓದುಗರು ಮತ್ತು ಗಂಭೀರ ಓದುಗರಿಬ್ಬರೂ ಹೊಸ ಹೊಸ ಪುಳಕಗಳಿಗಾಗಿ, ಮೋಹಕ ಕಚಗುಳಿಗಾಗಿ ಓದುತ್ತಾರೆ. ಜೀವಂತವಾದ ನುಡಿಗಟ್ಟುಗಳು, ಭಾಷಾ ಪ್ರಯೋಗದಲ್ಲಿನ ನಾವೀನ್ಯತೆ, ಆರಿಸಿಕೊಳ್ಳುವ ವಸ್ತುವಿನ ಪ್ರಸ್ತುತತೆ ಮತ್ತದರ ಗಾಂಭೀರ್ಯಗಳು ಹದ ಬೆರೆತು ಓದುಗರನ್ನು ಸೂಜಿಕಲ್ಲಿನಂತೆ ಸೆಳೆಯುತ್ತವೆ. ಹಾಗಾಗಿಯೇ ಎಲ್ಲ ಮನಸ್ಥಿತಿಯ ಓದುಗರು ತೇಜಸ್ವಿಯವರನ್ನು ಓದುತ್ತಾರೆ. ಹಾಗಾಗಿಯೇ ತೇಜಸ್ವಿಯವರು ಕನ್ನಡದ ಉಳಿದ ಲೇಖಕರಿಗಿಂತ ಭಿನ್ನವಾಗುತ್ತಾರೆ. ಮಿಂಚು ಎಂಬ ಯುವ ಅನುವಾದಕಿಯೊಬ್ಬರು ತೇಜಸ್ವಿಯಂಥಾ ವ್ಯಕ್ತಿತ್ವವನು ಹಾಗೂ ಧನಂಜಯ ಜೀವಾಳದ ಬರಹವನು ತಮ್ಮ ಪ್ರಥಮ ಪ್ರಯತ್ನದ ಸರಕನ್ನಾಗಿಸಿಕೊಂಡಿರುವುದು ವಿಶೇಷ, ಅವರಿಗೆ ಶುಭವಾಗಲಿ” ಎಂದು ಹಾರೈಸಿದರು.

ಅನುವಾದಕಿ ಮಿಂಚುರವರು ತಮಗೆ ಅನುವಾದಿಸಲು ಅವಕಾಶ ನೀಡಿದಂತಹ ಲೇಖಕರು ಹಾಗೂ ಪ್ರಕಟಣೆಗೆ ಮುಂದಾದ ಪ್ರಕಾಶಕರಿಗೆ ಧನ್ಯವಾದ ಅರ್ಪಿಸಿ, ತರ್ಜುಮೆಯ ಅವಧಿಯಲಿ ಎದುರಾದ ಸವಾಲುಗಳು ಹಾಗೂ ಆ ದಿನಗಳ ಆತಂಕವನು ವಿವರಿಸಿದರು.

“ಕನ್ನಡ ಭಾಷೆಯನ್ನು ಓದಲು ಬಾರದ ಆದರೆ ತೇಜಸ್ವಿಯವರ ಬದುಕು-ಬರಹವನ್ನು ತಿಳಿಯಲು ಕುತೂಹಲವಿರುವ ಲಕ್ಷಾಂತರ ಸಾಹಿತ್ಯಾಸಕ್ತರಿಗೆ ಹಾಗೂ ಕನ್ನಡದ ಬಗೆಗೆ ಅಭಿಮಾನ, ಗೌರವ, ಪ್ರೀತಿ ಹಾಗೂ ಆಸಕ್ತಿ ಹೊಂದಿರುವ ಕನ್ನಡ ಪ್ರೇಮಿಗಳಿಗೆ ಈ ಪುಸ್ತಕವು ಕನ್ನಡ ನಾಡು-ನುಡಿ, ಸಾಹಿತ್ಯ-ಲೇಖಕರ ಬಗೆಗೆ ತಿಳಿಯಲು ಒಂದು ಅಪೂರ್ವ ಕಿಟಕಿಯಾಗಲಿದೆ” ಎಂದು ತಿಳಿಸಿದ ಟೋಟಲ್ ಕನ್ನಡ ಪ್ರಕಾಶನ ಸಂಸ್ಥೆಯ ಮಾಲೀಕರಾದ ಲಕ್ಷ್ಮೀಕಾಂತ್ ರವರು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು.

ಶ್ರೀಮತಿ ಮಂಜುಳಾ ಬಾಬುರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಜ್ಯೋತಿ ಪ್ರಶಾಂತ್ ರವರು ತಮ್ಮ ಅನನ್ಯ ನಿರೂಪಣೆಯ ಮೂಲಕ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ತೇಜಸ್ವಿಯವರ ಬಗ್ಗೆ ಕುತೂಹಲಕಾರಿಯಾದ ಸ್ವಾರಸ್ಯಕರ ಮಾಹಿತಿಗಳನು ಕನ್ನಡ ಹಾಗೂ ಇಂಗ್ಲೀಷಿನಲಿ ತಿಳಿಯಲು ಅನುವಾಗಿಸಿರುವ ಟೋಟಲ್ ಕನ್ನಡದ ಈ ಪ್ರಯತ್ನವನು ಶ್ಲಾಘಿಸಿದ ಓದುಗರನ್ನು ಉದ್ದೇಶಿಸಿದ ನಿರೂಪಕರು ಧನಂಜಯ ಜೀವಾಳರ ಪುಸ್ತಕಗಳಾದ
1. ತೇಜಸ್ವಿ ನನಗೆ ನಿಮಿತ್ತ
2. ಗ್ರಾಮಾಯಣ ೧
3. ಗ್ರಾಮಾಯಣ ೨
4. ಹೇಳದೇ ಉಳಿದ ಕಥೆಗಳು (photo album)
5. Nimiththa ಮುಂತಾದುವನ್ನು ಅಂಚೆಯ ಮುಖಾಂತರ ಪಡೆಯಲು 99862 22402 ಈ ನಂಬರ್ ಗೆ ಕರೆಮಾಡಲು ಸಲಹೆ ನೀಡಿದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ