ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ವ್ಯಾಪ್ತಿಯಲ್ಲಿ ನೂರಾರು ರೈತರ ಜಮೀನಿನ ಪೋಡಿ ದುರಸ್ತಿ ಕಾರ್ಯಕ್ಕೆ ಹೆಚ್ಚುವರಿಯಾಗಿ ನಮೂದಾಗಿರುವ 572ನೇ ಸರ್ವೇ ನಂಬರ್ ಅಡ್ಡಿಯಾಗಿದೆ. ಈ ಸ.ನಂ ರನ್ನು ರದ್ದುಪಡಿಸಿ ರೈತರಿಗಾಗುತ್ತಿರುವ ಸಮಸ್ಯೆ ಬಗೆಹರಿಸಬೇಕೆಂದು ಊರುಬಗೆ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ರಾಮದ ರೈತ ಎಚ್.ಎಂ.ಸುಜಯ್‍ಕುಮಾರ್ ; ಗೋಣಿಬೀಡು ಹೋಬಳಿ, ಊರುಬಗೆ ಗ್ರಾಮದ ಸ.ನಂ 435ರಲ್ಲಿ 4 ಎಕರೆ ಜಮೀನು ನನ್ನ ತಂದೆ ಎಚ್.ಜಿ.ಮೋಟೇಗೌಡ ಅವರ ಹೆಸರಿನಲ್ಲಿ ಮಂಜೂರಾಗಿತ್ತು. ಜಮೀನು ದುರಸ್ತಿಗಾಗಿ 3 ವರ್ಷದ ಹಿಂದೆಯೇ ಸರ್ವೆ ಕಾರ್ಯು ಮುಗಿದಿದ್ದು ಇದುವರೆಗೂ ದುರಸ್ತಿಯಂತೆ ಹೊಸ ಸರ್ವೆ ನಂ. ನೀಡಿ ಪಹಣಿ ಇಂಡೀಕರ ಮಾಡಿಲ್ಲ.
ಮೂಲ ದಾಖಲೆ ಇಲ್ಲದ ಹೆಚ್ಚುವರಿಯಾಗಿ ಪಹಣಿಯಲ್ಲಿ ನಮೂದಾಗಿರುವ ಸ.ನಂ572 ರಿಂದ ತನಗೆ ಮಾತ್ರವಲ್ಲ. ಗ್ರಾಮದ ನೂರಾರು ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.
ಸರ್ವೆ ಶಾಖೆಯಲ್ಲಿ ಸ.ನಂ. 572ರ ಆಕರ್ ಬಂದ್ ದಾಖಲೆ ಲಭ್ಯವಿಲ್ಲ. ಅಲ್ಲದೇ ಈ ಸ.ನಂ. ಯಾವ ಮೂಲದಿಂದ ಬಂದಿದೆ ಎಂಬುದಕ್ಕೆ ಸರ್ವೆ ಶಾಖೆಯಲ್ಲಿ ಉತ್ತರವಿಲ್ಲ. ಯಾವುದೇ ಮೂಲ ದಾಖಲೆ ಇಲ್ಲದೇ ಪಹಣೆ ದಾಖಲಾಗಿರುವುದು ನಿಯಮ ಬಾಹೀರವಾಗಿದೆ.
ಈ ಸಮಸ್ಯೆಗೆ ಡಿಡಿಎಲ್‍ಆರ್, ಎಡಿಎಲ್‍ಆರ್ ಹಾಗೂ ಸೂಪರ್ ವೈಸರ್ ನೇರ ಹೊಣೆಗಾರರಾಗಿದ್ದು, ಕಡತವನ್ನು ಸರ್ವೆ ಇಲಾಖೆಯಿಂದ ಕಂದಾಯ ಇಲಾಖೆ, ತಹಸಿಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಹೀಗೆ ಒಬ್ಬರಿಗೊಬ್ಬರು ವರ್ಗಾವಣೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ.
ಇನ್ನು 15 ದಿನದಲ್ಲಿ ಹೆಚ್ಚುವರಿಯಾಗಿ ನಮೂದಿಸಿರುವ ಸ.ನಂ 572ರನ್ನು ರದ್ದುಪಡಿಸಿ ರೈತರ ನೆರವಿಗೆ ಬಾರದಿದ್ದರೆ ಊರುಬಗೆ ಗ್ರಾಮಸ್ಥರು ಹಾಗೂ ರೈತ ಸಂಘಟನೆಯಿಂದ ತಾಲೂಕು ಕಚೇರಿ ಎದುರು ದರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಎಚ್.ಬಿ.ಮಂಜುನಾಥ್, ಎಚ್.ಜಿ.ವೆಂಕಟೇಶ್, ಚಂದ್ರೇಗೌಡ ಕೆಲ್ಲೂರು ಉಪಸ್ಥಿತರಿದ್ದರು.



