ಮೂಡಿಗೆರೆ ಕಾಂಗ್ರೇಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಶನಿವಾರ ಮೂಡಿಗೆರೆ ರೈತಭವನದಲ್ಲಿ ಶಾಸಕರು ಕರೆದಿರುವ ಕಾರ್ಯಕ್ರಮಕ್ಕೂ ಕಾಂಗ್ರೇಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಶಾಸಕರ ನಡುವಿನ ಭಿನ್ನಮತ ಬಹಿರಂಗವಾಗಿ ವ್ಯಕ್ತವಾಗಿದೆ.
ನಾಳೆ ಶನಿವಾರ ಮೂಡಿಗೆರೆ ರೈತಭವನದಲ್ಲಿ ಶಾಸಕರು ಕ್ಷೇತ್ರದ ಬೂನ್ ಸಮಿತಿ ಅಧ್ಯಕ್ಷರು ಸೇರಿದಂತೆ ಆಯ್ದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ; ಅಕ್ಟೋಬರ್ 25 ರಂದು ಮೂಡಿಗೆರೆ ಪಟ್ಟಣದ ರೈತಭವನದಲ್ಲಿ ಶಾಸಕರು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆಂಬ ಮಾಹಿತಿ ಬಂದಿದ್ದು, ಅದು ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ ಎಂದು ತಿಳಿಸಿದ್ದಾರೆ.
ತಾಲೂಕಿನಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮ ನಡೆದರೂ ಅದು ತನ್ನ ಗಮನಕ್ಕೆ ತರದೇ ನಡೆಸುವಂತಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮ ಏರ್ಪಡಿಸಿದ್ದರೂ, ಕಾರ್ಯಕರ್ತರನ್ನು ಕರೆಯುವ ಕಾರ್ಯಕ್ರಮ ರೂಪಿಸುವ ಅಧಿಕಾರ ಇರೋದು ಪಕ್ಷದ ಅಧ್ಯಕ್ಷರಿಗೆ ಮಾತ್ರ. ಪಕ್ಷದ ಗಮನಕ್ಕೆ ಬಾರದೇ ಬೇರೆಯವರು ಆಯೋಜಿಸುವ ಕಾರ್ಯಕ್ರಮ ಅದು ಪಕ್ಷದ ಕಾರ್ಯಕ್ರಮವಲ್ಲವೆಂದು ಕಾರ್ಯಕರ್ತರು ಅರಿತುಕೊಳ್ಳಬೇಕೆಂದು ತಿಳಿಸಿದ್ದಾರೆ.
ಶನಿವಾರ ರೈತ ಭವನದಲ್ಲಿ ಪಕ್ಷದ ಹೆಸರಿನಲ್ಲಿ ಶಾಸಕರು ಸಂವಾದ ಕಾರ್ಯಕ್ರಮ ನಡೆಸುತ್ತಿದ್ದಾರೆಂಬುದು ಪಕ್ಷದ ಗಮನಕ್ಕೆ ಬಂದಿಲ್ಲ. ಅದು ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಪಕ್ಷದ ಗಮನಕ್ಕೆ ಬಾರದೇ ಯಾರೂ ಯಾವ ಕಾರ್ಯಕ್ರಮ ಕೂಡ ಮಾಡುವಂತಿಲ್ಲವೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪಕ್ಷದ ನಿಯಮ ಉಲ್ಲಂಘಿಸಿ, ಪಕ್ಷದ ಗಮನಕ್ಕೆ ಬಾರದೇ ಏಕ ಪಕ್ಷೀಯವಾಗಿ ಯಾರೇ ಪಕ್ಷದ ಕಾರ್ಯಕ್ರಮ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಇದರೊಂದಿಗೆ ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಶಾಸಕಿ ನಯನಾ ಮೋಟಮ್ಮ, ಪಕ್ಷದ ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಹಾಗೂ ಪಕ್ಷದ ಹಿರಿಯ ಮುಖಂಡರುಗಳ ನಡುವೆ ನಡೆಯುತ್ತಿರುವ ಭಿನ್ನಮತ ಬಹಿರಂಗವಾಗಿಯೇ ವ್ಯಕ್ತವಾಗಿದೆ.

ಗುರುವಾರ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ ಅವರ ನಿವಾಸದಲ್ಲಿ ಎಂಎಲ್ಸಿ ಡಾ. ಆರತಿ ಕೃಷ್ಣಾ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕಿ ನಯನ ಮೋಟಮ್ಮ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಇಲ್ಲಿ ಪಕ್ಷದ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅನೇಕ ಹಿರಿಯ ನಾಯಕರು, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮತ್ತು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಸುಮಾರು 300ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಕಾರ್ಯಕ್ರಮ ಶಾಸಕಿ ನಯನಾ ಮೋಟಮ್ಮನವರ ವಿರುದ್ಧ ಅಸಮದಾನಗೊಂಡವರ ಶಕ್ತಿ ಪ್ರದರ್ಶನದ ಸಭೆ ಎಂದೇ ಬಿಂಬಿತವಾಗಿತ್ತು, ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ವಕ್ತಾರರಾದ ಹೆಚ್.ಹೆಚ್. ದೇವರಾಜು ಅವರು ತಮ್ಮ ಮಾತಿನಲ್ಲಿ ಪರೋಕ್ಷವಾಗಿ ಶಾಸಕಿಯವರ ವಿರುದ್ಧದ ಅಸಮದಾನವನ್ನು ಹೊರಹಾಕಿದ್ದರು. ಈ ಸಭೆಯಲ್ಲಿ ಅನೇಕ ಮಂದಿ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದು, ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು.

ಇತ್ತೀಚೆಗೆ ಪಕ್ಷದ ಹಿರಿಯ ಮುಖಂಡರ ನಿಯೋಗವೊಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಶಾಸಕರ ವಿರುದ್ಧ ತಮ್ಮ ಅಹವಾಲು ಸಲ್ಲಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರಕ್ಕೆ ಖುದ್ದಾಗಿ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಮೂಡಿಗೆರೆ ಕಾಂಗ್ರೇಸ್ ಪಕ್ಷದಲ್ಲಿ ದೊಡ್ಡ ಬಿರುಕು ಮೂಡಿಸಿದ್ದು, ಕಾರ್ಯಕರ್ತರು ಮತ್ತು ಮುಖಂಡರು ಎರಡು ಗುಂಪುಗಳಲ್ಲಿ ವಿಂಗಡಣೆಯಾಗಿದ್ದಾರೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಿದೆ.



