6Mudigere1A

 

 

ಹಣ ದುರುಪಯೋಗ ಹಾಗೂ ಪೋಷಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದ ಮೂಡಿಗೆರೆ ಬಿಳಗುಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ  ವಿರುದ್ಧ ಕ್ರಮ ಕೈಗೊಂಡು, ಬೇರೆಡೆಗೆ ವರ್ಗಾಹಿಸುವಂತೆ ಒತ್ತಾಯಿಸಿ ಎಸ್‍ಡಿಎಂಸಿ ಪದಾಧಿಕಾರಿಗಳು, ಹೆಸಗಲ್ ಗ್ರಾ.ಪಂ. ಸದಸ್ಯರು ಹಾಗೂ ಪೋಷಕರು ಶನಿವಾರ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಚೂಡಾಮಣಿ ಅವರು ಬಿಳಗುಳ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಂದ ಮೇಲೆ ಶಾಲೆ ವಾತಾವರಣವೇ ಬದಲಾಗಿದೆ. ಗ್ರಾ.ಪಂ.ಯಿಂದ ಗಣಿತ ಕಲಿಕಾ ಹಬ್ಬ ಕಾರ್ಯಕ್ರಮದಡಿ ಏರ್ಪಡಿಸಿದ್ದ ಪರೀಕ್ಷೆಯಲ್ಲಿ ನಮ್ಮ ಶಾಲೆ ಇಬ್ಬರು ಮಕ್ಕಳು ಅತೀ ಹೆಚ್ಚು ಅಂಕ ಪಡೆದಿದ್ದರು. ಅವರಿಗೆ ತಲುಪಬೇಕಾದ ಹಣವನ್ನು ನೀಡಿರಲಿಲ್ಲ. ಈ ವಿಚಾರ 6 ತಿಂಗಳ ಬಳಿಕ ಎಸ್‍ಡಿಎಂಸಿ ಗಮನಕ್ಕೆ ಬಂತು. ಈ ಬಗ್ಗೆ ವಿಚಾರಿಸಿದ ಬಳಿಕ ವಿದ್ಯಾರ್ಥಿಗಳಿಗೆ ಹಣ ಕೊಟ್ಟಿದ್ದಾರೆ. ಕಳೆದ ವರ್ಷ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನೇ ಮಾಡಿಲ್ಲ. ಹಣ ದುರುಪಯೋಗದಂತಹ ಗಂಭೀರ ಆರೋಪ ಬಗ್ಗೆ ಎಸ್‍ಡಿಎಂಸಿಯಿಂದ ಅನೇಕ ಬಾರಿ ಬಿಇಒ ಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಿಲ್ಲವೆಂದು ದೂರಿದರು.

ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್ ಅವರು ಶಾಲೆ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲದೇ ದಾನಿಗಳ ನೆರವು ಪಡೆದು ಶಾಲೆಗೆ ಬೇಕಾದ ಮೂಲ ಸೌಕರ್ಯ ಒದಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಶಾಲೆ ಅಭಿವೃದ್ಧಿ ವಿಚಾರದಲ್ಲಿ ಮುಖ್ಯ ಶಿಕ್ಷಕಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಮನಸ್ಸಿಗೆ ಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷರ ವಿರುದ್ಧ ಮಹಿಳಾ ಆಯೋಗಕ್ಕೆ ಸುಳ್ಳು ದೂರು ನೀಡಿದ್ದಾರೆ. ಇಂತಹ ಮುಖ್ಯ ಶಿಕ್ಷಕಿ ನಮಗೆ ಬೇಕಾಗಿಲ್ಲ. ಸೋಮವಾರದಿಂದ ಅವರು ಶಾಲೆಗೆ ಬಂದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಬದಲಾಗಿ ಬಯಲಿನಲ್ಲಿ ಕೂರಿಸಿ ಪಾಠ ಕಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಮುಖ್ಯ ಶಿಕ್ಷಕಿ ವಿರುದ್ಧ ಬಿಇಒ ಮೀನಾಕ್ಷಿ ಅವರಿಗೆ ಮನವಿ ಸಲಿಸಿದರು.

ಬಿಇಒ ಮೀನಾಕ್ಷಿ ಮಾತನಾಡಿ, ಮುಖ್ಯ ಶಿಕ್ಷಕಿ ವಿರುದ್ಧ ಆರೋಪ ಬಂದ ಮೇಲೆ ನೋಟೀಸು ನೀಡಿ, 3 ಬಾರಿ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ತಪ್ಪು ಮಾಡಿರುವುದು ಕಂಡು ಬಂದಿತ್ತು. ಆದರೆ ಶಾಲೆಗೆ ಕೆಟ್ಟ ಹೆಸರು ಬರಬಾರದೆಂಬ ದೃಷ್ಟಿಯಿಂದ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಲು ಎಚ್ಚರಿಕೆ ಕೂಡ ನೀಡಿದ್ದೆ. ಮತ್ತೆ ಪುನರಾವರ್ತನೆಗೆ ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ಧ ಕ್ರಮ ವಹಿಸಲಾಗುವುದೆಂದು ಹೇಳಿದರು.

ಹೆಸಗಲ್ ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ್, ಅರವಿಂದ, ಪೂರ್ಣೇಶ್, ಎಸ್‍ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್, ಉಪಾಧ್ಯಕ್ಷೆ ಮುಬೀನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ ಅನುಕುಮಾರ್, ಮಂಜಣ್ಣ, ಅಣ್ಣಪ್ಪ, ಸಂಪತ್, ಕಿಶೋರ್‍ಶೆಟ್ಟಿ, ನವೀನ್‍ಗೌಡ, ಅರುಣ್, ವಿಂತೇಶ್, ಸಬೀನಾ, ಸವಿತಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ