ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಭದ್ರಬುನಾದಿ. ಆತ್ಮವಿಶ್ವಾಸ, ಆತ್ಮಗೌರವ ಮತ್ತು ಆತ್ಮಪ್ರೀತಿ ಮಹಿಳೆಗೆ ಅಲಂಕಾರ ಎಂದು ಬೆಂಗಳೂರು ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕಿ ಡಾ.ದಿವ್ಯಾಸತೀಶ್ ಅಭಿಪ್ರಾಯಿಸಿದರು.
ಚಿಕ್ಕಮಗಳೂರು ಅಕ್ಕಮಹಾದೇವಿ ಮಹಿಳಾ ಸಂಘ ಕಲ್ಯಾಣನಗರದ ಶರಣೆ ಮಾದಲಾಂಬಿಕೆ ತಂಡ ‘ಹೊಸ್ತಿಲ ಹುಣ್ಣಿಮೆ’ ಕಾರ್ಯಕ್ರಮ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಇಂದು ಮಾತನಾಡಿದರು.
ಮಹಿಳೆಯರು ಕುಟುಂಬ ಮತ್ತು ಸಮಾಜದ ಆಧಾರಸ್ತಂಭ. ಸುಶಿಕ್ಷಿತ ಮಹಿಳೆಯರಲ್ಲಿ ಆತ್ಮವಿಶ್ವಾಸದ ಮಟ್ಟ ಹೆಚ್ಚಾಗಿರುತ್ತದೆ. ಆರ್ಥಿಕ ಸಬಲತೆ, ಪ್ರಶ್ನಿಸುವ ಮನೋಭಾವ, ಹಕ್ಕುಗಳ ಅರಿವು ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ಧೈರ್ಯವನ್ನು ತಂದುಕೊಡುತ್ತದೆ. ಶಿಕ್ಷಣ ಮಹಿಳಾ ಸಬಲೀಕರಣಕ್ಕೆ ಭದ್ರಬುನಾದಿ ಎಂದ ಡಾ.ದಿವ್ಯಾ, ಭಯ ಇಲ್ಲದ ಬದುಕಿಗಿದು ದಾರಿಮಾಡಿಕೊಡುತ್ತದೆ ಎಂದರು.
ಮಹಿಳೆಯರ ಸಬಲೀಕರಣ ಕೊಟ್ಟಿದ್ದಲ್ಲ ಪಡೆದುಕೊಂಡಿರುವುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಗ ಮತ್ತು ಮಗಳನ್ನು ಸಮಾನವಾಗಿ ಪರಿಗಣಿಸಬೇಕು. ಮಹಿಳೆಯರಲ್ಲೂ ಆತ್ಮವಿಶ್ವಾಸ ಮನೋಬಲ ಹೊಂದಬೇಕು. ಸವಾಲನ್ನು ನಿರ್ವಹಿಸುವ ಶಕ್ತಿ ಮಹಿಳೆಯರಿಗೆ ಹೆಚ್ಚಾಗಿರುತ್ತದೆ. ವಿದ್ಯಾವಂತ ಮಹಿಳೆ ಇಂದು ಕ್ರಿಯಾಶೀಲತೆ ಹೊಂದಿರುತ್ತಾಳೆ. ಮನೆಯ ಒಳಗೆ, ಉದ್ಯೋಗ-ವ್ಯವಹಾರದಲ್ಲಿ, ಸರ್ಕಾರಿ ನೌಕರಿಯಲ್ಲಿ ತೊಡಗಿದಾಗ ಲಿಂಗಬೇಧ, ವೇತನ ತಾರತಮ್ಯ, ಮುಜುಗರದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂದÀು ವಿವರಿಸಿದರು.
ಸಣ್ಣ ಸಾಧನೆಗಳನ್ನು ಸಂಭ್ರಮಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮಹಿಳಾ ಸಬಲೀಕರಣಕ್ಕೆ ಅವಕಾಶಗಳಷ್ಟೆ ಸಾಲದು, ಚಿಕ್ಕಪುಟ್ಟ ಸಾಧನೆ ಮಾಡಿದಾಗ ಅದನ್ನು ಗುರುತಿಸಿ, ಪ್ರೋತ್ಸಾಹಿಸಿ, ಗೌರವಿಸಿದರೆ ಅವರ ಆತ್ಮವಿಶ್ವಾಸದ ಮಟ್ಟ ಹೆಚ್ಚುತ್ತದೆ. ಕುಟುಂಬದಿಂದ ಭಾವನಾತ್ಮಕವಾದ ಬೆಂಬಲ ಹೆಚ್ಚಿನ ಶಕ್ತಿ ತಂದುಕೊಡುತ್ತದೆ ಎಂದವರು ಸಲಹೆ ನೀಡಿದರು.
ಮಹಿಳೆಯರು ಇಂದು ಆಯ್ಕೆ ಸ್ವಾತಂತ್ರ್ಯ ಹೊಂದಿದ್ದಾರೆ. ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ಇಷ್ಟಕ್ಕೆ ಅನುಗುಣವಾಗಿ ಬದುಕುವ ಅವಕಾಶ ಹೊಂದಿದ್ದಾರೆ. ಬ್ಯಾಂಕ್‍ನಲ್ಲಿ ವ್ಯವಹರಿಸುವುದನ್ನು ಗ್ರಾಮೀಣ ಪ್ರದೇಶದ ಮಹಿಳೆಯರೂ ಅರಿತಿದ್ದಾರೆ. ಕನಸು ದೊಡ್ಡದಾಗಿ ಕಾಣಬೇಕು. ಭಯ ಇಲ್ಲದೆ ಆತ್ಮಗೌರವದಿಂದ ಸುಂದರವಾಗಿ ಬದುಕಬೇಕು. ಇದಕ್ಕೆಲ್ಲ ಕುಟುಂಬದ ಪುರುಷರ ಬೆಂಬಲ ಅಗತ್ಯ ಎಂದ ಡಾ.ದಿವ್ಯಾ, ಅಕ್ಕಮಹಾದೇವಿ ಸಂಘ ಮಹಿಳಾ ಸಬಲೀಕರಣಕ್ಕೊಂದು ನಿದರ್ಶನವಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಮಾರ್ಗಶಿರಮಾಸದಲ್ಲಿ ಬರುವ ಹೊಸ್ತಿಲಹುಣ್ಣಿಮೆ ವಿಷ್ಣು ಮತ್ತು ಲಕ್ಷ್ಮೀಗೆ ಪ್ರಿಯಾವಾದ ಮಾಸ. ಶ್ರೀದತ್ತಾತ್ರೇಯ ಸ್ವಾಮಿ ಹುಟ್ಟಿದ ದಿನವೂ ಇಂದು ಆಗಿದೆ. ಗ್ರಾಮೀಣಪ್ರದೇಶದಲ್ಲಿ ಹುಣ್ಣಿಮೆಯಂದು ಗೋಧೋಳಿ ಸಮಯದಲ್ಲಿ ಹೊಸ್ತಿಲಪೂಜೆ ಮಾಡಿ ಲಕ್ಷ್ಮಿಯನ್ನು ಬರಮಾಡಿಕೊಂಡು ಪ್ರಾರ್ಥಿಸಿ ಪೂಜಿಸುವ ಪದ್ಧತಿ ಇದೆ ಎಂದರು.
ಅಂಗವಾಡಿ ಕಾರ್ಯಕರ್ತೆಯಾಗಿ ವಿಶೇಷ ಸೇವೆಸಲ್ಲಿಸಿರುವ ಹಿನ್ನಲೆಯಲ್ಲಿ ‘ಶಿಕ್ಷಣ ರತ್ನ’ ‘ಸುವರ್ಣದೇವಿ ಮಹಿಳಾರತ್ನ’ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಹಿನ್ನಲೆಯಲ್ಲಿ ಹಿರಿಯಸದಸ್ಯೆ ಶೈಲಾಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳಾತಮ್ಮಯ್ಯ ಮತ್ತು ಮಧುಮತಿಅವರನ್ನು ಗೌರವಿಸಲಾಯಿತು.
ತಂಡದ ಮುಖಂಡೆ ಯಮುನಾಚಂದ್ರಶೇಖರ್ ಪ್ರಾಸ್ತಾವಿಸಿ ಮಹಿಳೆಯರು ತಮ್ಮ ಆರೋಗ್ಯಪಾಲನೆಯತ್ತ ಹೆಚ್ಚಿನ ಗಮನಕೊಡಬೇಕು. ಇದೇ ಹಿನ್ನಲೆಯಲ್ಲಿ ಇಂದು ಶಿಲ್ಪಾ ನೇತೃತ್ವದಲ್ಲಿ ನ್ಯೂಟ್ರೇಷನ್‍ಟಾಕ್ ಆರೋಗ್ಯ ತಪಾಸಣೆ ಶಿಬಿರದಲ್ಲಿ 150ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು.
ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ, ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಯಮುನಾ, ಕಾರ್ಯದರ್ಶಿ ಆಶಾ ಹೇಮಂತ್, ಖಜಾಂಚಿ ಪಾರ್ವತಿಬಸವರಾಜ್, ಸಹಕಾರ್ಯದರ್ಶಿ ಮಧುಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಮಂಜುಳಮ್ಮ ವೇದಿಕೆಯಲ್ಲಿದ್ದರು.
ಸದಸ್ಯರಾದ ಹೇಮಲತಾ ಸ್ವಾಗತಿಸಿ, ಶಾಂತಾ ವಂದಿಸಿದರು. ಮಮತಾ ಮತ್ತು ದೇವಿಕಾ ನಿರೂಪಿಸಿದರು, ಪ್ರಮೀಳಾ ಮತ್ತು ಶೃತಿ ಪ್ರಾರ್ಥಿಸಿ, ಪ್ರೇಮಾ, ರೂಪಾರವಿ ತಂಡ ನಾಡಗೀತೆ ಹಾಡಿದರು. ಕುಸುಮಾಪರಮೇಶ್ ಅತಿಥಿ ಪರಿಚಯಿಸಿದರು.
ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ನಿರ್ದೇಶಕಿ ಯಮುನಾಚಂದ್ರಶೇಖರ್ ಬಹುಮಾನ ವಿತರಿಸಿದರು. ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.



