ವಿಮಾ ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ರಾಜ್ಯ ಸರಕಾರ ಬೆಳೆ ವಿಮೆ ಪರಿಹಾರ ನೀಡುವ ಮಾರ್ಗಸೂಚಿ ಮಾನದಂಡ ಬದಲಾವಣೆ ಮಾಡಿದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಯೋಜನೆಯಲ್ಲಿ ಹಣ ಪಾವತಿಸದೇ ವಂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಅತಿಯಾದ ಮಳೆಯಿಂದ ಶೇ.80ರಷ್ಟು ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ, ಶುಂಠಿ ಇತರೆ ಬೆಳೆಗಳು ನಾಶವಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳಲು ಜಿಲ್ಲೆಯಲ್ಲಿ 39,550 ರೈತರು ಬೆಳೆವಿಮೆ ಪಾವತಿಸಿದ್ದಾರೆ. ಆದರೆ 9,000 ರೈತರಿಗೆ ವಿಮೆ ಕಟ್ಟಿದ ಹಣಕ್ಕಿಂತ ಕಡಿಮೆ ಹಣ ಪಾವತಿಸಿದ್ದು, ಉಳಿದ ರೈತರನ್ನು ಕೈ ಬಿಡಲಾಗಿದೆ. ಕೂಡಲೇ ರಾಜ್ಯ ಮಟ್ಟದ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೇಂದ್ರಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ರೈತರಿಗೆ ಆದ ಅನ್ಯಾಯ ಹಾಗೂ ಬೆಳೆಯ ಆರ್ಥಿಕ ನಷ್ಟವನ್ನು ಭರಿಸಿಕೊಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರೈತ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಗೆ ನೀಡಿದರು.
ತಾಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಹವಮಾನ ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದು, ಅವುಗಳ ನಿರ್ವಹಣೆಯಾಗಬೇಕು. ವಿಮೆ ನೀಡಲು 30ರಿಂದ 40 ಕೀ.ಲೋ ದೂರವಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಡಿಮೆ ಮಳೆಯಾಗಿರುವ ಪ್ರದೇಶವನ್ನು ಪರಿಗಣಿಸಿದ್ದರಿಂದ ಹಾಗೂ ಮಾರ್ಗಸೂಚಿ ಬದಲಿಸಿದ್ದರಿಂದ ರೈತರಿಗೆ ವಿಮೆ ಹಣ ದಕ್ಕದಂತಾಗಿದೆ. ರೈತರು ಕೃಷಿಗೆ ಹಾಗೂ ವಿಮೆಗೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ. ಇದರಲ್ಲಿ ಕಾಣದ ಕೈಗಳು ವಿಮೆ ಕಂಪನಿಯೊಂದಿಗೆ ಶಾಮೀಲಾಗಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ ಅತಿವೃತ್ತಿ ಘೋಷಣೆಯಾದ ಬೆಳೆ ಪರಿಹಾರದ ಮೊತ್ತವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ಗೌಡ, ಮುಖಂಡರಾದ ಪ್ರದೀಪ್ ಯು.ಹೊಸಳ್ಳಿ, ವಾಸುದೇವ ಸತ್ತಿಗನಹಳ್ಳಿ ಉಪಸ್ಥಿತರಿದ್ದರು.




