ಭೀಮ ಕೋರೆಗಾಂವ್ ಆಚರಣ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 3ರಂದು ಮೂಡಿಗೆರೆ ಪಟ್ಟಣದಲ್ಲಿ ಅದ್ದೂರಿಯಾಗಿ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ತನ್ನ ಅಧ್ಯಕ್ಷತೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಭೀಮ ಕೋರೆಗಾಂವ್ ವಿಜಯೋತ್ಸವ ಸಮಿತಿÀ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ತಿಳಿಸಿದ್ದಾರೆ.
ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, 01-01-1818 ರಲ್ಲಿ ಭೀಮಾ ಕೋರೆಗಾಂವ್‍ನಲ್ಲಿ 2ನೇ ಬಾಜಿರಾವ್ ಪೇಶ್ವೆ ಹಾಗೂ ಮಹಾರ್ ಸೈನಿಕರ ನಡುವೆ ಐತಿಹಾಸಿಕ ಯುದ್ಧ ನಡೆದಿತ್ತು. ಆ ಸಂದರ್ಭದಲ್ಲಿ ದಲಿತ ಹೋರಾಟಗಾರರು ಆಹಾರ, ನೀರು, ವಿಶ್ರಾಂತಿ ಇಲ್ಲದೇ ಸತತ 12 ಗಂಟೆ ಯುದ್ಧ ನಡೆಸಿ, 28.000 ಮಂದಿ ಪೇಶ್ವೆ ಸೈನ್ಯದ ಬಲವನ್ನು ಸೋಲಿಸಿದ ಸ್ಮರಣೀಯ ಕದವವಾಗಿತ್ತು. ಅಲ್ಲದೇ ಭಾರತದ ಇತಿಹಾಸದಲ್ಲೇ ಹೆಸರಾದ ಈ ಯುದ್ಧ ದಲಿತರ ಆತ್ಮಗೌರವ, ಸ್ವಾಭಿಮಾನ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ಜನರಲ್ಲಿ ಜಾಗೃತಿಗೊಳಿಸುವ ಸಲುವಾಗಿ ಕಳೆದ 3 ವರ್ಷದಿಂದ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಿಕೊಂಡು ಬರಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 3 ವರ್ಷದಿಂದ ಸಂಘದ ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು ಸೇರಿದಂತೆ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಹಾಗೂ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅದ್ದೂರಿ ಹಾಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿಯೂ ಕೂಡ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅದ್ದೂರಿ ಹಾಗೂ ವಿಭಿನ್ನವಾಗಿ ನಡೆಸಲು ಭರದಿಂದ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಉತ್ತಮ ಚಿಂತಕರು, ವಾಗ್ಮಿಗಳನ್ನು ಕರೆಸಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದ್ದಾರೆ.
*****



