ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ದಲಿತರೇ ಅತೀಹೆಚ್ಚು ಜನಸಂಖ್ಯೆ ಹೊಂದಿದ್ದು ಬಹುಸಂಖ್ಯಾತರಾದ ದಲಿತರನ್ನು ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಛಲವಾದಿ ಬಲಗೈ ಸಮುದಾಯವು ದಲಿತ ಸಮುದಾಯದಲ್ಲಿ ಅತೀ ಹೆಚ್ಚು ಸಂಖ್ಯೆಯನ್ನು ಹೊಂದಿದ್ದು ಛಲವಾದಿ ಬಲಗೈ ದಲಿತ ಸಮುದಾಯದಿಂದ ಈವರೆಗೂ ಒಬ್ಬರೇ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಆಯ್ಕೆಯಾಗದಿರುವುದು ನಿಜಕ್ಕೂ ವಿಷಾದನೀಯ, ಛಲವಾದಿ ಬಲಗೈ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಛಲವಾದಿ ಮಹಾಸಭಾ ಮೂಡಿಗೆರೆ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಬೆಟ್ಟಗೆರೆ ಮಂಜುನಾಥ್‌ರವರು ಒತ್ತಾಯಿಸಿದರು.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು ; ಸ್ವತಂತ್ರ್ಯ ಬಂದಾಗಿನಿಂದಲೂ ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರವೇ ಅತೀ ಹೆಚ್ಚು ಬಾರಿ ಅಧಿಕಾರ ಹಿಡಿದಿದ್ದು ಬಹುಮತವಿದ್ದರೂ ಸಹ ಈವರೆಗೂ ಒಬ್ಬ ದಲಿತ ಮುಖಂಡರನ್ನು ಮುಖ್ಯಮಂತ್ರಿಯನ್ನಾಗಿಸದೆ ಅನ್ಯಾಯವೆಸಗಲಾಗುತ್ತಿದೆ. ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸೇರಿದಂತೆ ಪ್ರಮುಖ ನಾಯಕರುಗಳನ್ನು ಕಾಲಕಾಲದಲ್ಲಿ ಅವಕಾಶ ವಂಚಿತರನ್ನಾಗಿಸಿ ಅವರುಗಳನ್ನು ಪಕ್ಷಕ್ಕೆ ದುಡಿಸಿಕೊಂಡು ಮುಖ್ಯಮಂತ್ರಿ ಸ್ಥಾನದ ವಿಚಾರ ಬಂದಾಗ ತಾರತಮ್ಯ ಮಾಡಿ ದಲಿತ ಸಮುದಾಯಕ್ಕೆ ಪದೇಪದೆ ಅನ್ಯಾಯವೆಸಗಲಾಗುತ್ತಲೇ ಬರಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರವರು ಅಧ್ಯಕ್ಷತೆಯಲ್ಲಿಯೇ ಕಾಂಗ್ರೇಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗಲೂ ಸಹ ರಾಜಕೀಯ ಕುಟಿಲ ತಂತ್ರವೆಸಗಿ ದಲಿತನ್ನು ವಂಚಿಸುತ್ತಲೇ ಬರಲಾಗುತ್ತಿದೆ, ಇದು ನಿಜಕ್ಕೂ ಸಮುದಾಯದ ದುರಂತವೇ ಸರಿ. ಆದ್ದರಿಂದ ಪ್ರಸ್ತುತ ಮುಖ್ಯಮಂತ್ರ ಬದಲಾವಣೆ ಕೂಗು ಮುನ್ನಲೆಗೆ ಬಂದಿದ್ದು ಈ ಸಮಯದಲ್ಲಿಯಾದರೂ ದಲಿತರನ್ನು ನಿರಾಶೆಗೊಳಿಸದೆ, ರಾಜ್ಯ ರಾಜಕೀಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಛಲವಾದಿ ದಲಿತ ಬಲಗೈ ಸಮುದಾಯದ ಹಿರಿಯ ನಾಯಕರನ್ನು ಒಮ್ಮತದಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಛಲವಾದಿ ಮಹಾಸಭಾ ಮೂಡಿಗೆರೆ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಬೆಟ್ಟಗೆರೆ ಮಂಜುನಾಥ್‌ರವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಸಗಲ್ ಗಿರೀಶ್, ರಾಜೇಶ್ ಬಗ್ಗಸಗೋಡು, ಕೆಂಚಯ್ಯ ಜೇನುಬೈಲ್, ಬೈರಿಗದ್ದೆ ರಮೇಶ್, ಕೋಮರಾಜ್ ಚಕ್ರಮಣಿ, ನಾಗೇಶ್ ಜೇನುಬೈಲ್, ದೇವರಾಜ್ ಹೆಸಗಲ್, ಗಿರೀಶ್ ಹಂಡುಗುಳಿ ಮತ್ತು ಇತರರು ಉಪಸ್ಥಿತರಿದ್ದರು.



