ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅಪಮಾನ ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ವಿವಿಧ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಆ.8 ರಂದು ಉತ್ತರ ಪ್ರದೇಶದ ರಾಮಲಾಲ್ ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದಾರೆಂಬ ಕಾರಣಕ್ಕೆ ಆ ಸ್ಥಳವನ್ನು ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯ ಸಮಿತಿ ಎಂಬ ಸಂಘಟನೆ ಹಸುವಿನ ಗಂಜಲ, ಸಗಣಿ ಹಾಕಿ ಶುದ್ದಿ ಕಾರ್ಯ ಮಾಡಿರುವುದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅಪಮಾನವಲ್ಲ. ಇಡೀ ದಲಿತ ಸಮಾಜಕ್ಕೆ ಮಾಡಿದ ಅಪಮಾನ. ಇಂತಹ ಹೀನ ಕೃತ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಕೇಂದ್ರ ಸರಕಾರ ಪ್ರಾಸಿಸ್ಟ್, ಮನುವಾದಿ ಸರಕಾರ. ಅವರ ಪ್ರಚೋಧನೆಯಿಂದಲೇ ಇಂತಹ ದುರ್ಘಟನೆ ನಡೆಯುತ್ತಿದೆ. ಇಲ್ಲವಾದರೆ ಖರ್ಗೆ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ಇಷ್ಟೋತ್ತಿಗೆ ಕ್ರಮವಾಗಬೇಕಿತ್ತು. ದೇಶ ಕಂಡ ಮಹಾನ್ ವ್ಯಕ್ತಿ ಖರ್ಗೆ ಅವರಿಗೆ ಇಂತಹ ಅಪಮಾನ ಮಾಡಿದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಾಗಬೇಕು. ವಿಜ್ಞಾನ, ತಂತ್ರಜ್ಞಾನ ಬದಲಾಗುತ್ತಿದೆ. ಆದರೆ ನಮ್ಮ ದೇಶದ ಜನರ ಮನಸ್ಥಿತಿ ಬದಲಾಗದಿರುವುದು ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ದೇಜಪ್ಪ, ಕಾರ್ಯದರ್ಶಿ ಕೆ.ಕೆ.ರಾಮಯ್ಯ, ವಿವಿಧ ಪಕ್ಷ ಹಾಗೂ ಸಂಘಟನೆ ಮುಖಂಡರಾದ ಎಚ್.ಜಿ.ಸುರೇಂದ್ರ, ಬಿ.ಎಸ್.ಜಯರಾಂಗೌಡ, ಕೆ. ಮಂಚೇಗೌಡ, ಎಲ್.ಬಿ.ರಮೇಶ್, ಎಂ.ಎಸ್.ಅನಂತ್, ಪ್ರಸನ್ನ ಮರಗುಂದ, ಕೆ.ಕೆ.ಕೃಷ್ಣಪ್ಪ, ಸುಂದ್ರೇಶ್ ಕನ್ನಾಪುರ, ಹಾಲಯ್ಯ, ಮಹೇಂದರ್ ಮೌರ್ಯ, ಅಯೂಬ್ ಹಾಜಿ, ಅಕ್ರಮ್ ಹಾಜಿ, ಬೈಕ್ ಅಣ್ಣು, ಹರೀಶ್ ಸಬ್ಬೇನಹಳ್ಳಿ, ಲಕ್ಷ್ಮಣ್ ಹುಣಸೆಮಕ್ಕಿ, ಹೊನ್ನಪ್ಪ ಮತ್ತಿತರರಿದ್ದರು.


