ಕೃಷಿಯಲ್ಲಿ ಏಳು ಬೀಳು, ಲಾಭ ನಷ್ಟ ಇದ್ದೇ ಇರುತ್ತದೆ. ನಷ್ಟವಾದಾಗ ಕುಗ್ಗಬಾರದು. ಭೂಮಿ ತಾಯಿ ನಂಬಿದರೆ ಖಂಡಿತಾ ಕೈ ಹಿಡಿಯತ್ತಾಳೆ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಪ್ರಗತಿಪರ ಕೃಷಿಕ ಡಾ. ಎಂ.ಸಿ.ರಂಗಸ್ವಾಮಿ ಮಗ್ಗೆಮನೆ ಹೇಳಿದರು.
ಅವರು ಶನಿವಾರ ಕೆವಿಕೆ ಆವರಣದಲ್ಲಿ 2ನೇ ದಿನದ ಕೃಷಿ ಮತ್ತು ತೋಟಗಾರಿಕಾ ಮೇಳ ಕಾರ್ಯಕ್ರಮದಲ್ಲಿ ಸಮಗ್ರ ಕೃಪಿಯಲ್ಲಿ ಆದಾಯ ದ್ವಿಗುಣ ಬಗ್ಗೆ ಮಾತನಾಡಿದರು.
ಕೃಷಿ ಭೂಮಿಯನ್ನು ಜಾಗ ಖಾಲಿ ಬಿಡದೇ ಎಲ್ಲಾ ಜಾಗವನ್ನು ಕೃಷಿಗೆ ಬಳಸಿಕೊಳ್ಳಬೇಕು. ಅದರಲ್ಲಿ ವಿವಿಧ ಬೆಳೆ ಜತಗೆ ವೈಜ್ಞಾನಿಕವಾಗಿ ಸಾವಯವ ಮಿಶ್ರ ಬೆಳೆ ಪದ್ಧತಿ ಮಾಡಬೇಕು. ಹೊಸ ತಳಿಗಳು, ತಂತ್ರಜ್ಞಾನ ಬೆಳೆಸಿಕೊಂಡು ನಾವು ಬೆಳೆದ ಬೆಳೆಯನ್ನು ನಮ್ಮದೇ ಆದ ಬ್ರಾಂಡ್ ಮಾಡಿ ಮಾರಬೇಕು. ಸರಕಾರ ರೈತರಿಗೆ ಸಬ್ಸಿಡಿ ಕೊಟ್ಟರೆ ಸಾಲುವುದಿಲ್ಲ. ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ಕೇಂದ್ರ ಹೆಚ್ಚಾಗಿ ಸ್ಥಾಪಿತವಾಗಬೇಕು.. ಹೊಸ ತಂತ್ರಜ್ಞಾನದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಸಂಶೋಧನೆ ಮತ್ತು ಅಧಿಕ ಆಧಾಯಕ್ಕೆ ಹೆಚ್ಚು ಆಧ್ಯತೆ ನೀಡಬೇಕು. ಬುದ್ದಿವಂತ ವಿಜ್ಞಾನಿಗಳನ್ನು ನಮ್ಮ ದೇಶದಲ್ಲೇ ಉಳಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಜಿ.ಎನ್.ಕರಣ್ ಅವರು, ಆಧುನಿಕ ಕಾಫಿ ಬೆಳೆಯ ತಾಂತ್ರಿಕತೆ ಬಗ್ಗೆ ಮಾತನಾಡಿ, ಕಾಫಿ ಬೆಳೆ ಮುಂದಿನ ವರ್ಷ ಉತ್ತಮ ಫಸಲು ಬರಬೇಕೆಂದರೆ ಸಮಯಕ್ಕೆ ಸರಿಯಾಗಿ ಕಾಫಿ ಕುಯ್ಲು ನಡೆಸಬೇಕು. ಹೂವು ಬಿಡುವ ಸಂದರ್ಭದಲ್ಲಿ ರಂಜಕ, 1 ವರ್ಷದಲ್ಲಿ 3ರಿಂದ 4 ಬಾರಿ ನೀರಾಯಿಸಲು ನೀರಿನ ಅವಶ್ಯಕತೆ ಇದೆ. ನೆರಳು ನಿರ್ವಹಣೆ, ಮಣ್ಣಿನ ಫಲವತ್ತತೆ, ಸೂಕ್ಷ್ಮ ಪೋಷಕಾಂಶ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ನೀಡುವ ಜತೆಗೆ ಸಮಯಕ್ಕೆ ಸಿರಿಯಾಗಿ ಗೊಬ್ಬರ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.
ಬಳಿಕ ಶಿವಮೊಗ್ಗದ ಅಡಕೆ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅವರಿಂದ ಅಡಕೆಯಲ್ಲಿ ಮಿಶ್ರ ಬೆಳೆ ಹಾಗೂ ಅಂತರ ಬೇಸಾಯಿ ಪದ್ಧತಿ ಬಗ್ಗೆ, ಎಸಿಎಫ್ ಎಂ.ಇ.ಚರಣ್ ಅವರಿಂದ ಕಾಡು ಪ್ರಾಣಿಗಳ ನಿರ್ವಹಣಾ ಕ್ರಮಗಳ ಬಗ್ಗೆ, ಶಿವಮೊಗ್ಗದ ಜಿಕೆಎಂಎಸ್‍ನ ಡಾ. ಪ್ರವೀಣ್ ಹಾಗೂ ಡಾ.ಮಹೇಶ್ ಅವರಿಂದ ಹವಮಾನ ಆಧಾರಿತ ಕೃಷಿ ಬಗ್ಗೆ ಮಾಹಿತಿ ನೀಡಲಾಯಿತು.
ಪ್ರಗತಿಪರ ಕೃಷಿಕ ಗೌತಳ್ಳಿ ಲಕ್ಷ್ಮಣ್‍ಗೌಡ, ಎಫ್ ಪಿ ಓ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಹಸಿರು ಆಗ್ರ್ಯಾನಿಕ್ಸ್ ಮುಖ್ಯಸ್ಥ ಬಿ.ಸಿ.ಅರವಿಂದ್, ಕೃಷಿಕ ಸಮಾಜದ ಕಾರ್ಯದರ್ಶಿ ಹೆಚ್.ಬಿ. ಜಗನ್ನಾಥ್‍ಗೌಡ, ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.




