ಪೋಷಕರು ಮತ್ತು ಗುರುಗಳ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಜಾವಳಿ ಬಿಜಿಎಸ್ ಎಸ್‍ಎಲ್‍ಆರ್‍ಜಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಿಜಿಎಸ್ ಉತ್ಸವ ಹಾಗೂ 2ನೇ ವರ್ಷದ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕೆಂಬ ಪರಿಕಲ್ಪನೆಯನ್ನು ಪೋಷಕರು ಹೊಂದಿರುತ್ತಾರೆ. ಅವರ ಆಸೆಯನ್ನು ಮಕ್ಕಳು ಹುಸಿ ಮಾಡಬಾರದು. ಮಕ್ಕಳಲ್ಲಿ ತನ್ನದೇ ಅದ ಪ್ರತಿಭಗಳು ಅಡಗಿರುತ್ತದೆ. ಅದನ್ನು ಹೊರ ತರುವ ಜತೆಗೆ ಮಕ್ಕಳ ಮಾನಸಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಉತ್ತಮ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಆದಿಚುಚಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಸಾಂಸ್ಕøತಿಕ ನೆಲೆಗಟ್ಟಿನ ಅಡಿಪಾಯ ಇಟ್ಟುಕೊಂಡು ನಮ್ಮ ಟ್ರಸ್ಟ್‍ನಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಟ್ಟಿಕೊಡುತ್ತಿದೆ. ಇದರಿಂದ ಶಿಕ್ಷಣದ ಜತೆಗೆ ನಾಡಿನ ಸಂಸ್ಕøತಿ, ಕಲೆ, ಪರಂಪರೆ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದ ಅವರು, ರೈತ ಮತ್ತು ವಿಜ್ಞಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಿಜಿಎಸ್ ಟ್ರೋಫಿ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸವಿನಯ ಗೌಡ ಅವರು ಬರೆದ ಟ್ರೈಟ್ ಪ್ಯೂಚರ್ ಇಂಗ್ಲೀಷ್ ಪುಸ್ತಕವನ್ನು ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಶಿಕ್ಷಣ ತಜ್ಞ ದುಗ್ಗಪ್ಪಗೌಡ ಲೋಕಾರ್ಪಣೆ ಮಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡಾ.ಪುರುಷೋತ್ತಮ್ ಮಂಗಳೂರು, ದೀಪಕ್ ದೊಡ್ಡಯ್ಯ, ಲೇಖಕ ಅರ್ಜುನ್ ದೇವಲದಕೆರೆ, ಬಿಜಿಎಸ್ ಸಂಸ್ಥೆ ಸಂಯೋಜಕ ಸೌಚಿತ್ ಕಿತ್ತಲೆಮನೆ ಹಾಗೂ ಶಾಲೆ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



