ಜನಮಾನಸದಲ್ಲಿ ಉಳಿಯುವಂತಹ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ತಾಲೂಕಿನ ಗೋಣಿಬೀಡು ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆ ಮುಖ್ಯವಾಗಿ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದನ್ನು ಒಳಗೊಂಡಂತೆ ವಿವಿಧ ರೀತಿಯ ಜನಪರವಾದ ಕಾರ್ಯಕ್ರಮಗಳನ್ನು ಹೆಚ್ಚಾಗಿ ರೂಪಿಸುವ ಜತೆಗೆ ಯುವಕ ಯುವತಿಯರನ್ನು ಸಂಸ್ಥೆಗೆ ಸೇರಿಸಬೇಕೆಂದು ಸಲಹೆ ನೀಡಿದರು.
ಸಂಸ್ಥೆಯಿಂದ ಈಗಾಗಲೇ ರಾಜ್ಯದಲ್ಲಿ ಸುಮಾರು 2 ಸಾವಿರ ಮಕ್ಕಳಿಗೆ ಹಾಗೂ 8 ಸಾವಿರ ಹಿರಿಯರಿಗೆ ಖರ್ಚಿಲ್ಲದೇ ಹೃದಯ ಚಿಕಿತ್ಸೆ ಮಾಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 200 ಶಾಲೆಗಳಿಗೆ ಸೆನ್ಸಾರ್ ಶೌಚಾಲಯ, ಉತ್ತರ ಕನ್ನಡ ಭಾಗದ 50 ಗ್ರಾಮಗಳಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ ನಡೆಸಿದ್ದು, ಇಂತಹ ಜನಪರವಾದ ಕಾರ್ಯವನ್ನು ಎಲ್ಲಾ ರೋಟರಿ ಸಂಸ್ಥೆಗಳಲ್ಲಿ ನಡೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಚಂದ್ರೇಶ್ ಮಗ್ಗಲಮಕ್ಕಿ, ಕೃಷಿಕ ಕರಣ್ ಗೌತಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಬೆಟ್ಟದಮನೆ ಸರಕಾರಿ ಶಾಲೆ ಮಕ್ಕಳಿಗೆ ಅನುಕೂಲಕ್ಕಾಗಿ ಶುದ್ಧ ಕುಡಿಯುವ ಫಿಲ್ಟರ್ ವಿತರಿಸಲಾಯಿತು.
ಗೋಣಿಬೀಡು ರೋಟರಿ ಸಂಸ್ಥೆ ಅಧ್ಯಕ್ಷ ಮಹಿಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಸಿ.ಎಸ್.ಮಹೇಶ್, ರೋಟರಿ ವಲಯ ಅಧಿಕಾರಿ ಎಚ್.ಎ.ಆದರ್ಶ, ಗೋಣಿಬೀಡು ರೋಟರಿ ಕಾರ್ಯದರ್ಶಿ ಎಂ.ಪಿ.ರಾಮು ಸೇರಿದಂತೆ ಸಂಸ್ಥೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.




