February 13, 2026

 

 

ಗೌಡಹಳ್ಳಿ ಹೊರಟ್ಟಿ ಗ್ರಾಮದಲ್ಲಿ : ಪೆಟ್ರೋಲಿಯಂ ಲೈನ್ ಸುರಕ್ಷತೆಯ ಬಗ್ಗೆ ಜಂಟಿ ಆಫ್ ಸೈಟ್ ಅಣಕು ಪ್ರದರ್ಶನ

ಗ್ಯಾಸ್ ಮತ್ತು ಪೆಟ್ರೋಲ್ ಲೈನ್ ಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ; ತಹಸೀಲ್ದಾರ್ ಅಶ್ವಿನಿ

ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಮತ್ತು ಪೆಟ್ರೋಲ್ ಡಿಸೇಲ್ ಸಾಗಾಣಿಕೆಗೆ ಅಳವಡಿಸಿರುವ ಪೈಪ್ ಲೈನ್ ಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಮೂಡಿಗೆರೆ ತಹಸೀಲ್ದಾರ್ ಅಶ್ವಿನಿಯವರು ಸಲಹೆ ನೀಡಿದರು.

ಅವರು ಗುರುವಾರ ಮೂಡಿಗೆರೆ ತಾಲ್ಲೂಕಿ ಗೌಡಹಳ್ಳಿ ಹೊರಟ್ಟಿ ಗ್ರಾಮದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಪೆಟ್ರೋನೆಟ್ ಎಂ ಹೆಚ್ ಬಿ ಲಿಮಿಟೆಡ್ ಜಂಟಿಯಾಗಿ ಆಯೋಜಿಸಿದ್ದ ಜಂಟಿ ಆಫ್ ಸೈಟ್ ಅಣಕು ಪ್ರದರ್ಶನವನ್ನು ವೀಕ್ಷಣೆ  ಮಾಡಿ ಸಭೆಯನ್ನು ಉದ್ದೆಶಿಸಿ ಮಾತನಾಡುತ್ತಿದ್ದರು.

ಮಂಗಳೂರು ಹಾಸನ ಮೈಸೂರು ಬೆಂಗಳೂರು ಎಲ್.ಪಿ.ಜಿ. ಪೈಪ್ ಲೈನ್ ಮತ್ತು ಮಂಗಳೂರು ಹಾಸನ ಬೆಂಗಳೂರು ಪೆಟ್ರೋಲ್ ಪೈಪ್ ಲೈನ್ ಮಂಗಳೂರು ಹಾಸನ  ನಡುವೆ ಚಿಕ್ಕಮಗಳೂರು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಹಾದುಹೋಗಿದೆ. ಇದು ಅತ್ಯಂತ ಸೂಕ್ಷ್ಮ ಮಾರ್ಗವಾಗಿದ್ದು, ಅವಘಡಗಳು ಸಂಭವಿಸಿದಾಗ ಸೂಕ್ತ ಮುನ್ನಚ್ಚರಿಕೆ ವಹಿಸಲು ಈ ಮಾರ್ಗದಲ್ಲಿ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ಗೌಡಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಮಾತನಾಡಿ ; ಈ ಪೈಪ್ ಲೈನ್ ಅಳವಡಿಕೆಯಿಂದ ದೇಶದ ಬೊಕ್ಕಸಕ್ಕೆ ಅತಿಹೆಚ್ಚಿನ ಉಳಿತಾಯವಾಗಿದೆ, ನಿತ್ಯ ಸಾವಿರಾರು ಟ್ಯಾಂಕರ್ ಗಳಲ್ಲಿ ಸಾಗಾಟವಾಗುತ್ತಿದ್ದ ತೈಲ ಮತ್ತು ಅನಿಲ ಪೈಪ್ ಲೈನ್ ಮೂಲಕ ಹೋಗುವುದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿದ್ದು, ಅಪಘಾತಗಳ ನಿಯಂತ್ರಣವಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದರು.

ಹೆಚ್.ಪಿ.ಸಿ.ಎಲ್. ನೆರಿಯಾ ಸ್ಟೇಷನ್ ಅಧಿಕಾರಿ ನರೇಶ್ ಬಾಬು ಅವರು ಮಾತನಾಡಿ ; ಪೈಪ್ ಲೈನ್ ಹಾದುಹೋಗಿರುವ ಮಾರ್ಗದಲ್ಲಿ ಯಾವುದೇ ಅಗೆತ ಮತ್ತು ದೊಡ್ಡ ಮರವಾಗುವ ಸಸಿಗಳನ್ನು ನಡೆವುದನ್ನು ನಿಷೇಧಿಸಲಾಗಿದೆ. ಮಾರ್ಗದ ಉದ್ದಕ್ಕೂ ಸಿಬ್ಬಂದಿಗಳನ್ನು ನೇಮಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಒಂದು ವೇಳೆ ಈ ಪೈಪ್ ಲೈನ್ ಹಾದುಹೋಗಿರುವ ಮಾರ್ಗದಲ್ಲಿ ಯಾವುದೇ ಕಾಮಗಾರಿ, ಜೆಸಿಬಿ, ಇಟಾಚಿ ಕೆಲಸ ಮಾಡುವುದು, ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡುವ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಸೂಚನಾ ಫಲಕದಲ್ಲಿರುವ ಟೋಲ್ ಫ್ರೀ ಸಂಖ್ಯೆಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡುವ ಜೊತೆಗೆ ಅವರಿಗೆ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್, ಊರುಬಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ, ಸದಸ್ಯರಾದ ಕೆ.ಪಿ. ಭಾರತಿ, ಜಿ.ಎಸ್.ಅಭಿಷೇಕ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ದೀಕ್ಷಿತ್, ಮೂಡಿಗೆರೆ ಅಗ್ನಿಶಾಮಕ ಠಾಣಾಧಿಕಾರಿ ದೇವೇಂದ್ರಪ್ಪ, ಊರುಬಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರಭಂಜನ್ ಹೆಚ್.ಪಿ.ಸಿ.ಎಲ್. ಮ್ಯಾನೇಜರ್ ತರುಣ್ ಕುಮಾರ್, ಪೆಟ್ರೋನೆಟ್ ನೆರಿಯಾ ಸ್ಟೇಷನ್ ಅಧಿಕಾರಿಗಳಾದ ಲೋಕೇಶ್ ಸಾನಿಲ್, ವದಿವೇಲ್ ಪ್ರಭು, ಹೆಚ್.ಪಿ.ಸಿ.ಎಲ್. ಹಾಸನ ಉಸ್ತುವಾರಿ ಪಂಕಜ್ ಕುಮಾರ್, ಸೇರಿದಂತೆ ಕಂಪನಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಶ್ರೀಮತಿ ಸುಚಿತ್ರ ಪ್ರಸನ್ನ ಪ್ರಾರ್ಥನೆ ನೆರವೇರಿಸಿದರು.

ಪೈಪ್ ಲೈನಗಳು ಹಾದುಹೋಗಿರುವ ಮಾರ್ಗದಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಂತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉಪೇಂದ್ರ ಸಭೆಯ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಗ್ಯಾಸ್ ಮತ್ತು ಪೆಟ್ರೋಲ್ ಲೈನ್ ಗಳಲ್ಲಿ ಲೀಕೇಜ್ ಆಗಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗೌಡಹಳ್ಳಿ, ಹೊರಟ್ಟಿ, ದೇವರುಂದ, ಊರುಬಗೆ ಮತ್ತು ಹಂತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ  ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ