ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ 5 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದವಿಪೂರ್ವ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಬೇಲೂರಿನ ಯುವಕ ಅತ್ಯಾಚಾರ ನಡೆಸಿದ್ದ, ಆತನ ವಿರುದ್ಧ ಈ ಹಿಂದೆಯೇ ಪೋಕ್ಸೋ ಪ್ರಕರಣ ದಾಖಲಾಗಿ ಆತ ಜೈಲು ಸೇರಿದ್ದಾನೆ. ಅತ್ಯಾಚಾರಕ್ಕೊಳಗಾದ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಅತ್ಯಾಚಾರ ನಡೆಸಿ ಜೈಲು ಸೇರಿರುವ ಯುವಕ ಹಾಗೂ ಯುವತಿಯ ಫೋಟೋವನ್ನು ಮೊಬೈಲ್ ನಲ್ಲಿ ಪಡೆದುಕೊಂಡಿದ್ದ ಕಣಚೂರು ಗ್ರಾಮದ 5 ಮಂದಿ ಆರೋಪಿಗಳು, ಯುವತಿಯನ್ನು ಬ್ಲಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಯುವತಿ ಗೋಣಿಬೀಡು ಪೊಲೀಸರಿಗೆ 5 ಮಂದಿಯ ವಿರುದ್ಧ ದೂರು ನೀಡಿದ್ದಾಳೆ.
ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ಕುಶಾ (27) ನಿತೇಶ್ (31) ಸಚಿನ್ (28) ಚಂದ್ರಶೇಖರ್ (31) ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸುರೇಶ (52) ನ್ಯಾಯಾಲಯದೆದುರು ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಸಿಪಿಐ ಕೆ.ವಿ.ರಾಜಶೇಖರ್, ಪಿಎಸ್ಐ ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



