ಆಫ್ರಿನ್
ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ ಸೇನೆಯ ಹಾಡು ಬಳಸಿ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ವೀಡಿಯೋವನ್ನು ತನ್ನ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದ ರೋಷನ್ ಎಂಬುವವನ್ನು ಬಂಧಿಸಲಾಗಿತ್ತು. ಇದೀಗ ಈ ಕಿಡಿಗೇಡಿ ಕೃತ್ಯದ ಮಾಸ್ಟರ್ ಮೈಂಡ್ ಚಿಕ್ಕಮಗಳೂರು ಟಿಪ್ಪು ನಗರದ ನಿವಾಸಿ ಆಫ್ರಿನ್ (23 ವರ್ಷ) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ಕಾರು ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಇನ್ಸ್ಟಾಗ್ರಾಮ್ ಬಳಸುತ್ತಿದ್ದ. ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಯುವಕರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದರು. ಇದನ್ನು ವಿಡಿಯೋ ಮಾಡಿ, ಅದಕ್ಕೆ ಪಾಕ್ ಸೇನೆಯ ಪರವಾದ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಆಫ್ರಿನ್ ವೈರಲ್ ಮಾಡಿದ್ದ.
ವೈರಿ ರಾಷ್ಟ್ರ ಪಾಕಿಸ್ಥಾನದ ಸೈನಿಕರನ್ನು ಹೊಗಳುವ ಹಾಡು ಬಳಸಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಚಿಕ್ಕಮಗಳೂರು ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧನರಾಜ್ ದೂರು ದಾಖಲಿಸಿದ್ದರು.
ನಮ್ಮ ಚಿಕ್ಕಮಗಳೂರಿನಲ್ಲಿ ಇಂತಹ ದೇಶವಿರೋಧಿ ಮನಸ್ಥಿತಿಯ ಯುವಕರು ಇರುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಂತಹ ಮನಸ್ಥಿತಿಯನ್ನು ರಾಜಾರೋಷವಾಗಿ ತೋರ್ಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಇಂತಹ ಮನಸ್ಥಿತಿಯವರನ್ನು ಮಟ್ಟಹಾಕುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


