ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗುಪ್ತಶೆಟ್ಟಿಹಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಗುಂಪು ಭಾನುವಾರ ರಾತ್ರಿ ಲಗ್ಗೆ ಇಟ್ಟಿದ್ದು, ಅಪಾರ ಬೆಳೆ ಹಾನಿಯನ್ನು ಮಾಡಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ಕಾಫಿ ಬೆಳೆಗಾರ ಎಚ್ ಜಿ, ಶಂಕರ್, ಈ ಭಾಗದಲ್ಲಿ ಸಾರಗೋಡು ಮೀಸಲು ಅರಣ್ಯ ಇರುವುದರಿಂದ ಕಾಡಾನೆಗಳ ಉಪಟಳ ನಿರಂತರವಾಗಿದೆ.
ಮೊದಲಿಗೆ ಒಂದೇ ಒಂದು ಕಾಡಾನೆ ಬರುತ್ತಿತ್ತು ಇತ್ತೀಚಿನ ದಿನಗಳಲ್ಲಿ ಮೂರಕ್ಕೂ ಹೆಚ್ಚು ಕಾಡಾನೆಗಳ ಗುಂಪು ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಕಾಫಿ ತೋಟಗಳಿಗೆ ನುಗ್ಗಿ, ಬಾಳೆ ಕಾಫಿ ಅಡಿಕೆ ಬೈನೆ
ಸಿಲ್ವರ್ ಸಸಿಗಳನ್ನು ಸಹ ನಾಶಪಡಿಸಿದ್ದು, ವಿದ್ಯುತ್ ಸಂಪರ್ಕ ಇರುವಾಗಲೇ ಕಂಬವನ್ನು ಮುರಿದು ಹಾಕಿದ್ದು, ಕಂಬಗಳು ಹತ್ತಿರ ಇರುವುದರಿಂದ ನಾಲ್ಕು ಕಂಬಗಳು ವಾಲಿದ್ದು, ತಂತಿಯು ಕೆಳಮಟ್ಟದಲ್ಲಿ ನೇತಾಡುತ್ತಿದೆ.
ಮೆಸ್ಕಾಂ ಇಲಾಖೆಯವರು ಶೀಘ್ರ ಸರಿಪಡಿಸದಿದ್ದರೆ ಕಾಡಾನೆಗಳ ಜೀವಕ್ಕೂ ಕುತ್ತು ಸಂಭವಿಸಲಿದೆ.
ಅರಣ್ಯ ಇಲಾಖೆಯವರ ಬಳಿ ಪಟಾಕಿಯನ್ನು ಕೇಳಿದರೆ ವ್ಯವಸ್ಥೆ ಕಲ್ಪಿಸುವುದಿಲ್ಲ ಪ್ರಸ್ತುತ ಕಾಫಿ ಹಣ್ಣಿನ ಕೊಯ್ಲು ಪ್ರಾರಂಭವಾಗಿದ್ದು, ಜನರನ್ನು ಕೆಲಸಕ್ಕೆ ನಿಯೋಜಿಸಲು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಮಳೆಯ ಅಬ್ಬರಕ್ಕೆ ತತ್ತರಿಸಿರುವ ಕಾಫಿ ಬೆಳೆಗಾರರು ಕಾಡಾನೆಗಳ ಸಮಸ್ಯೆಯಿಂದ ಇನ್ನಷ್ಟು ಬಳಲುವಂತಾಗಿದೆ.
ಹಳ್ಳಿಯ ಬೈರೇಗೌಡ ರವರ ಕಾಫಿ ತೋಟದ ಬಳಿ ಟೆಂಟಕಲ್ ಪೆನ್ಸಿಂಗ್ ಅನ್ನು ನಿರ್ಮಿಸಿದರೆ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಬಹುದು ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ, ಜನಪ್ರತಿನಿಧಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂದು
ಗುಪ್ತಶೆಟ್ಟಿಹಳ್ಳಿಯ ಕಾಫಿ ಬೆಳೆಗಾರರಾದ ಈರಯ್ಯ ರಾಮಯ್ಯ ಗಂಗಯ್ಯ ಒತ್ತಾಯಿಸಿದ್ದಾರೆ.



