ಶ್ರೀ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಇಡೀ ಜಗತ್ತಿಗೆ ಆದರ್ಶ ಜೀವನ ಮತ್ತು ಸನ್ಮಾರ್ಗದ ದಾರಿ ತೋರಿಸಿದೆ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ `ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣವು ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ, ಅದು ಆದರ್ಶ ಜೀವನದ ಸಂಹಿತೆ. ಪಿತೃವಾಕ್ಯ ಪರಿಪಾಲಕನಾಗಿ, ಆದರ್ಶ ಆಡಳಿತ ನೀಡಿದ ಶ್ರೀರಾಮ, ಪಾತಿವ್ರತ್ಯಕ್ಕೆ ಹೆಸರಾದ ಸೀತೆ, ಅಣ್ಣನ ಸೇವೆಗೆ ಸಮರ್ಪಿಸಿಕೊಂಡ ಲಕ್ಷ್ಮಣ ಹಾಗೂ ತ್ಯಾಗಮಯಿ ಭರತನಂತಹ ಪಾತ್ರಗಳ ಮೂಲಕ ವಾಲ್ಮೀಕಿಯವರು ಜಗತ್ತಿಗೆ ಶ್ರೇಷ್ಠ ಮೌಲ್ಯಗಳನ್ನು ಧಾರೆ ಎರೆದಿದ್ದಾರೆ ಎಂದರು.
ಸಂಪೂರ್ಣ ಹಾಗೂ ಸಮಗ್ರವಾದ ಜೀವನ ಹೇಗಿರಬೇಕು ಎಂಬುದನ್ನು ರಾಮಾಯಣದ ಮೂಲಕ ಜಗತ್ತಿಗೆ ನೀಡಿದ ಮಹಾನ್ ಕವಿ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದ ಅವರು, ರಾಮಾಯಣ ಮಹಾಕಾವ್ಯದ ಕತೃ ವಾಲ್ಮೀಕಿಯವರು ಪ್ರತಿಯೊಬ್ಬರ ಜೀವನಕ್ಕೂ ದಾರಿದೀಪವಾಗಿದ್ದಾರೆ ಎಂದರು.
ಸರ್ಕಾರವು ತಳಸಮುದಾಯಗಳ ಏಳಿಗೆಗಾಗಿ ಅನೇಕ ಯೋಜನೆ ಹಾಗೂ ಸೌಲಭ್ಯಗಳನ್ನು ನೀಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪೆÇೀಷಕರು ಈ ಆದ್ಯತೆಯನ್ನು ಸರಿಯಾಗಿ ಬಳಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆ ಮೂಲಕ ತಳಸಮುದಾಯದ ಮಕ್ಕಳು ಈ ದೇಶ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿಯಂತಹ ಮಹಾಪುರುಷರನ್ನು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತಗೊಳಿಸಬಾರದು. ಮಹಾಪುರುಷರ ವಿಚಾರಧಾರೆಗಳು ಸಮಾಜದ ಏಳಿಗೆ ಮತ್ತು ಸಮಸಮಾಜದ ನಿರ್ಮಾಣಕ್ಕಾಗಿ ಇವೆ. ಶೋಷಿತ ವರ್ಗಗಳ ಪರವಾಗಿ ಹಾಗೂ ಸಮಾಜದ ಒಳಿತಿಗಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ಈ ಮಹನೀಯರನ್ನು ಪ್ರತಿಯೊಬ್ಬರೂ ಹೆಮ್ಮೆಯಿಂದ ಸ್ಮರಿಸಬೇಕು ಎಂದರು.
ಶೋಷಿತ ವರ್ಗದ ವಾಲ್ಮೀಕಿಯವರು ಮುಂದೆ ಆದಿಕವಿಯಾಗಿ ಸಂಪೂರ್ಣ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ರಾಮನ ಆದರ್ಶಗಳು, ಸೀತೆ ಮತ್ತು ರಾಮಾಯಣದ ನೈಜ ತತ್ವಗಳನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಶ್ರೇಯಸ್ಸು ವಾಲ್ಮೀಕಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದ ಅವರು, ಮನುಷ್ಯ ಜೀವನದಲ್ಲಿ ಒಮ್ಮೆ ಗೊತ್ತಿಲ್ಲದೆ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ತಿದ್ದಿಕೊಂಡು, ಪಶ್ಚಾತ್ತಾಪಪಟ್ಟು ಸರಿಯಾದ ಹಾದಿಯಲ್ಲಿ ಸಮಾಜವನ್ನು ಮುನ್ನಡೆಸಿದಾಗ ಮಾತ್ರ ಒಬ್ಬ ಮಹಾನ್ ವ್ಯಕ್ತಿಯಾಗಲು ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯೇ ಅತ್ಯುತ್ತಮ ಉದಾಹರಣೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಮುನ್ನಲೆಗೆ ಬರಲು ಸಾಧ್ಯ. ಸರ್ಕಾರ ಪರಿಶಿಷ್ಟ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕು. ಇಂದಿನ ವೇಗದ ಯುಗದಲ್ಲಿ ಪ್ರತಿಯೊಬ್ಬರೂ ಅಧಿಕಾರ, ಹಣದ ಒತ್ತಡದಲ್ಲಿದ್ದು, ಅನ್ಯಾಯ, ಅಸಮಾನತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರಂತಹ ಮಹಾನ್ ಚೇತನಗಳ ಜೀವನ ಚರಿತ್ರೆಯನ್ನು ಓದಿ, ಕರುಣೆ ಹಾಗೂ ನೈತಿಕತೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಮೌಲ್ಯಗಳು ಹಾಗೂ ತತ್ವಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ ಆಡಳಿತ ಯಂತ್ರದಲ್ಲೂ ಅಳವಡಿಕೆಯಾಗಬೇಕು. ರಾಮರಾಜ್ಯ ಎಂದರೆ ಆಡಳಿತ ಭಾಷೆಯಲ್ಲಿ `ಉತ್ತಮ ಆಡಳಿತ’ ಎಂದರ್ಥ. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಆಡಳಿತದಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಧಿಕಾರಿಗಳ ಆದ್ಯ ಕರ್ತವ್ಯ ಎಂದರು.
ಜಯಂತಿ ಆಚರಣೆಗಳು ಕೇವಲ ವೇದಿಕೆ ಕಾರ್ಯಕ್ರಮ ಅಥವಾ ಮೆರವಣಿಗೆಗೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ಮತ್ತು ಮಕ್ಕಳಿಗೆ ವಾಲ್ಮೀಕಿ ಅವರ ಆದರ್ಶಗಳು ಹಾಗೂ ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇಲಾಖೆಯಿಂದ ಪ್ರದರ್ಶನ ಮಳಿಗೆಗಳು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಕಾಯ್ದಿರಿಸಲಾದ ಅನುದಾನವು ಕಡ್ಡಾಯವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ ಚರ್ಚೆಯಾದಂತೆ ನ್ಯೂಟ್ರಿಷನ್ ಕಿಟ್ ಟೆಂಡರ್ ಸಮಸ್ಯೆಯನ್ನು ಸಚಿವರು ಮತ್ತು ಕಾರ್ಯದರ್ಶಿಗಳ ಗಮನಕ್ಕೆ ತಂದು ಪರಿಹರಿಸಲಾಗಿದ್ದು, ಪೂರೈಕೆ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತಿ, ಜಿಲ್ಲೆಯ ವಾಲ್ಮೀಕಿ ಭವನದ ಕಾಮಗಾರಿಯಲ್ಲಿ ಕಂಡುಬಂದಿರುವ ನಿಧಾನಗತಿ ಹಾಗೂ ಕಳಪೆ ಕಾಮಗಾರಿ ಕುರಿತು ಶಾಸಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ವಿಶೇಷ ಸಭೆ ಕರೆದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲ್ಲೂಕು, ಅಣಜಿ ನಾಗವಂದ ಶ್ರೀ ಮಾರುತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಹೆಚ್.ಇ ಮಹರ್ಷಿ ವಾಲ್ಮೀಕಿ ಜೀವನ ಸಾಧನೆ, ಬೋಧನೆಗಳ ಕುರಿತು ಉಪನ್ಯಾಸ ನೀಡಿದರು.
ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಪಿ.ಹೆಚ್.ಡಿ ಪದವಿ ಪಡೆದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿತೇಮದರ್ ಕುಮಾರ್ ದಯ್ಮಾ, ತಹಸೀಲ್ದಾರ್ ರೇಶ್ಮಾ ಶೆಟ್ಟಿ. ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಾರ್ವಜನಿಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು


