October 27, 2026
;
suddi-5

 

 

ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸುವ ಸಲುವಾಗಿ ಉಭಯ ಬಣಗಳಿಂದ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿಗೆ ಕೊಂಡೊಯ್ಯಲು ವೀಕ್ಷಕರಾಗಿ ಶನಿವಾರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಮೋಹನ್, ಉಸ್ಮಾನ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2 ಗುಂಪುಗಳ ನಡುವೆ ಗೊಂದಲ ನಡೆದು ಹೊಯ್ ಕೈ ವರೆಗೂ ತಲುಪಿದಾಗ ಹಿರಿಯರು ಸಮಾಧಾನಪಡಿಸಿದ್ದಾರೆ.

ಬಣಕಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ನಯನಾ ಮೋಟಮ್ಮ ಅವರು ಶಾಸಕಿಯಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರವೆ ನಡೆದಿದೆ. ಕ್ಷೇತ್ರದ ಜನ ಶಾಸಕರ ಪರವಾಗಿದ್ದಾರೆ. ಹಿರಿಯರ ಬಣದಲ್ಲಿ ಗುರುತಿಸಿಕೊಂಡವರು ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಇದನ್ನು ಶಾಸಕರು ತಿರಸ್ಕರಿಸಿದ್ದರಿಂದ ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಪ್ರಸ್ತುತ ಸಮನ್ವಯ ಸಮಿತಿ ರಚಿಸುವಂತೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಒಡಕು ಉಂಟಾಗಿದೆ ಎಂದು ವೀಕ್ಷಕರ ಗಮನಕ್ಕೆ ತಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಜಿ.ಸುರೇಂದ್ರ ಮಾತನಾಡಿ, ಒಂದು ವಾರದಲ್ಲಿ ಉತ್ತರ ನೀಡುವಂತೆ ನನಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಿದ ದಿನವೆ ನನ್ನನ್ನು ವಜಾಗೊಳಿಸಿ ಬೇರೊಬ್ಬರನ್ನು ಹಂಗಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದು ಸರಿಯಲ್ಲ. ಇದರ ಹಿಂದೆ ಶಾಸಕರ ಕೈವಾಡವಿದೆ. ನನ್ನನ್ನು ವಜಾಗೊಳಿಸಿದಂತೆ ಈಗಿನ ಹಂಗಾಮಿ ಅಧ್ಯಕ್ಷರನ್ನು ಒಂದುವರೆ ತಿಂಗಳಲ್ಲೆ ವಜಾಗೊಳಿಸಿ ಮತ್ತೊಬ್ಬರನ್ನು ನೇಮಿಸಿದರೆ ನನಗೆ ಅನ್ಯಾಯ ಮಾಡಿದಂತೆ ಹಂಗಾಮಿ ಅಧ್ಯಕ್ಷರಿಗೂ ಅನ್ಯಾಯವಾಗುತ್ತದೆ ಎಂದು ತಿಳಿಸುತ್ತಿದಂತೆ ಸಭೆಯಲ್ಲಿ ಗೊಂದಲವೇರ್ಪಟ್ಟಿತು.

ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲದ ನನ್ನನ್ನು ನೇಮಕ ಮಾಡಲಾಗಿತ್ತು. ಏಕಾಏಕಿ ವಜಾಗೊಳಿಸಲಾಗಿದೆ. ನಂತರ ಕಿಕ್ ಔಟ್ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾ ಪಕ್ಷದಿಂದಲೆ ನಮಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ನಾವು ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷದ ಇನ್ನೊಂದು ಗುಂಪಿನಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿರುವುದರಿಂದ ನಾವು ಈಗಾಗಲೆ ಕೆಪಿಸಿಸಿಗೆ ದೂರು ನೀಡಿದ್ದೇವೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಭಯ ಬಣದ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ. ಇದುವರೆಗೂ ಸಮನ್ವಯ ಸಮಿತಿ ರಚಿಸಿಲ್ಲ. ನಾವು ನೀಡಿರುವ ದೂರನ್ನು ಕೆಪಿಸಿಸಿಯಿಂದ ಬಗೆಹರಿಸುವ ಮುನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಮಾಡುವುದಾದರೂ ಯಾಕೆ? ನಮ್ಮ ಸಮಸ್ಯೆ ಬಗೆಹರಿದ ಬಳಿಕ ಅಧ್ಯಕ್ಷರ ನೇಮಕಾತಿ ಮಾಡಿ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಇನ್ನು ಸಾಲು ಸಾಲಾಗಿ ಚುನಾವಣೆ ಎದುರಿಸಬೇಕಾಗಿದೆ. ಇದಕ್ಕೆ ಕಾರ್ಯಕರ್ತರು ಅಭಿಪ್ರಾಯ ಭೇದವನ್ನು ಮರೆತು ಪಕ್ಷವನ್ನು ಗೆಲ್ಲಿಸಲು ಸಜ್ಜಾಗಬೇಕು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ದೃಷ್ಟಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗಾಗಿ ಕೆಪಿಸಿಸಿಯಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗುವವರು 40 ರಿಂದ 60 ವರ್ಷ ವಯಸ್ಸಿನವರಾಗಬೇಕು. ಪಕ್ಷದಲ್ಲಿ ಗುಂಪುಗಾರಿಕೆ ಬೇಡ. 8 ಮಂದಿ ಆಕಾಂಕ್ಷಿಗಳ ಹೆಸರನ್ನು ಪಟ್ಟಿ ಮಾಡಿ ವೀಕ್ಷಕರಿಗೆ ಕೊಡಿ. ಕೆಪಿಸಿಸಿ ಮುಖ್ಯಸ್ಥರು ತೀರ್ಮಾನಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ವೀಕ್ಷಕರಾಗಿ ಬಂದಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಎಸ್‍ಐಆರ್ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ ಮತ್ತು ವಿಪಕ್ಷಗಳಿಂದ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ವಿರುದ್ಧ ಅನಗತ್ಯ ಆರ್ಭಟದ ವಿರುದ್ಧ ಪಕ್ಷದ ಕಾರ್ಯಕರ್ತರು ಹೋರಾಟ ನಡೆಸಬೇಕು. ಅದನ್ನು ಬಿಟ್ಟು ಪಕ್ಷದಲ್ಲಿ ಗೊಂದಲ ಸೃಷ್ಟಿಸಿ ಜಗಳಕ್ಕಿಳಿಯಬಾರದು. ಇಂದಿರಾಗಾಂಧಿ ಅವರನ್ನು ಗೆಲ್ಲಿಸಿದ ಈ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಒಡಕು ಇರಬಾರದು. ನ.15ರೊಳಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವರಿಷ್ಠರು ನೇಮಿಸಲಿದ್ದಾರೆ. ಇಲ್ಲಿನ ಪ್ರಸ್ತುತ ಬೆಳವಣಿಗೆ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ವರದಿ ನೀಡಲಾಗುವುದು. ಅವರು ಗೊಂದಲವನ್ನು ಸರಿಪಡಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರ ಬಣದವರಿಗೆ ನಾಲ್ಕೈದು ಬಾರಿ ಹೊಯ್ ಕೈ ಮಾರಾಮಾರಿ ನಡೆಯಿತು.

ಹಿರಿಯರ ಬಣದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿನಯ್ ಕುಮಾರ್, ಮರಗುಂದ ಪ್ರಸನ್ನ, ಸುಂದರೇಶ್, ಕೆ.ಕೆ.ರಾಮಯ್ಯ, ಇರ್ಫಾನ್, ಶಾಸಕರ ಬಣದಿಂದ ಎಂ.ಎನ್.ಅಶ್ವಥ್, ಎ.ಜಿ.ಸುಬ್ರಾಯಗೌಡ, ಕುನ್ನಳ್ಳಿ ರವಿ, ಸುದೀರ್ ಚಕ್ರಮಣಿ ಅವರ ಹೆಸರನ್ನು ವೀಕ್ಷಕರಿಗೆ ನೀಡಲಾಯಿತು.

ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕುನ್ನಳ್ಳಿ ರವಿ, ಜಿ.ಎಚ್.ಹಾಲಪ್ಪಗೌಡ, ಎಂ.ಎಂ.ಲಕ್ಷ್ಮಣಗೌಡ, ವಿನಯ್ ಕುಮಾರ್, ಜಯರಾಮ್, ಸುರೇಂದ್ರ, ಮನು, ಮರಗುಂದ ಪ್ರಸನ್ನ, ಎ.ಜಿ.ಸುಬ್ರಾಯಗೌಡ, ಹೊಸಕೆರೆ ರಮೇಶ್, ಸುಬ್ರಮಣ್ಯ, ಸುರೇಂದ್ರ ಉಗ್ಗೆಹಳ್ಳಿ, ಯು.ಎಚ್.ಹೇಮಶೇಖರ್, ನಿಶಾಂತ್ ಪಟೇಲ್, ಎಂ.ಎನ್.ಅಶ್ವಥ್, ಎಂ.ಎ.ಹಂಝ, ಸಬ್ಲಿ ದೇವರಾಜ್, ದೀಕ್ಷಿತ್ ಕಣಚೂರು, ಸುಧೀರ್ ಚಕ್ರಮಣಿ, ಅಜ್ಮಲ್, ಯು.ಪಿ.ಜಗದೀಶ್, ಇರ್ಫಾನ್, ಸಿ.ಬಿ.ಶಂಕರ್ ಅಜೀಜ್ ಕೊಟ್ಟಿಗೆಹಾರ ಇತರರಿದ್ದರು.

 

 

Leave a Reply

Your email address will not be published. Required fields are marked *