‘ಚಿನ್ನದ ಸರ’ ಕಿರುಚಿತ್ರದಲ್ಲಿ ನಮ್ಮೂರ ಪ್ರತಿಭೆ ವೈಷ್ಣವಿ ಎನ್.ರಾವ್ ತನ್ನ ಸಹಜಾಭಿನಯದ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ. ಈಕೆ ನಮ್ಮೂರ ಹೆಮ್ಮೆಯ ಪ್ರತಿಭೆ ಎಂದು ಕಳಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಗುಣಶೀಲ ಸದಾಶಿವ ತಿಳಿಸಿದರು..
ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿ ಸೋಮವಾರ ಸಂಜೆ ಜರುಗಿದ , ತಪಸ್ವಿ ಮೀಡಿಯಾ ಪ್ರೊಡಕ್ಷನ್‌ರವರ ಕತೆಗಾರ ಸರಣಿಯ `ಚಿನ್ನದ ಸರ’ ಕಿರುಚಿತ್ರದ ಪೋಸ್ಟರ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತ್ರಿವೇಣಿಯವರಿಗೆ ಅನುಪಮ ಸ್ಥಾನವಿದೆ. ಅವರ ಚಿನ್ನದ ಸರ ಕತೆಯು ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಅದನ್ನು ಕಿರುಚಿತ್ರವಾಗಿಸಿ ಪ್ರೇಕ್ಷಕರ ಮುಂದಿಡುವುದು ನಿಜಕ್ಕೂ ಸಂತಸದ ಸಂಗತಿ. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಪುತ್ರಿ ಅಶ್ವಿನಿ ಅನೀಶ್ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
” ವೈಷ್ಣವಿ ಎನ್ ರಾವ್ ಬಾಲ್ಯದಿಂದಲೂ ಗಾಯಕಿ, ನೃತ್ಯ ಕಲಾವಿದೆ, ಬರಹಗಾರ್ತಿ, ನಟಿಯಾಗಿ ತನ್ನನ್ನು ಗುರುತಿಸಿಕೊಂಡವಳು. ಓದಿನಲ್ಲಿ ಮುಂದಿದ್ದರೂ ಇವಳಲ್ಲಿ ರಕ್ತಗತವಾಗಿ ಕಲೆಯು ಇರುವುದರಿಂದ ಈ ಕ್ಷೇತ್ರದಲ್ಲೂ ಪರಿಶ್ರಮ ಹಾಕುತ್ತಿರುವುದು ನಿಜಕ್ಕೂ ಅಭಿನಂದನೀಯ. ಅವಳು ಅವಳ ಕ್ಷೇತ್ರ ಆಯ್ದುಕೊಳ್ಳಲಿ ಎಂದು ಸ್ವಾತಂತ್ರ್ಯ ನೀಡಿರುವ ತಂದೆ ತಾಯಿಯರೂ ನಿಜಕ್ಕೂ ಅಭಿನಂದನೀಯರು ಎಂದು ಅವರು ತಿಳಿಸಿದರು.
ನಗರದ ಎಂ.ಎಲ್.ಎಂ.ಎನ್. ಹೈಸ್ಕೂಲು ಶಿಕ್ಷಕ ಬಿ.ಕೆ.ಸದಾಶಿವ ಅವರು ಮಾತನಾಡಿ, ಬಡತನವನ್ನು ಇಂದಿಗೂ ಅನುಮಾನದಿಂದ ನೋಡುವ ಪ್ರವೃತ್ತಿ ನಮ್ಮ ನಡುವೆ ಇದೆ. ಆ ಕಾಲದಲ್ಲಿಯೇ ತ್ರಿವೇಣಿಯವರು ಇದನ್ನು ಗ್ರಹಿಸಿ, ಉತ್ತಮ ಕತೆ ಬರೆದಿದ್ದರು. ಅದನ್ನು ಧಾರಾವಾಹಿಯ ರೂಪಕ್ಕೆ ತರುವುದು ಸ್ತುತ್ಯಾರ್ಹ ಕಾರ್ಯ. ಈ ಕಿರುಚಿತ್ರದಲ್ಲಿ ಪ್ರತಿಯೊಬ್ಬರ ಅಭಿನಯವೂ ಹಿತವಾಗಿದೆ. ಅಬ್ಬರದ ಸಂಗೀತದ ಈ ಜಮಾನದಲ್ಲಿ ಚಿನ್ನದ ಸರ ಕಿರುಚಿತ್ರದ ಹಿನ್ನೆಲೆ ಸಂಗೀತ ನಿಜಕ್ಕೂ ಕರ್ಣಾನಂದ ನೀಡುತ್ತದೆ. ಕೊನೆಯಲ್ಲಿ ಬರುವ ಸಂದೇಶ ಎಲ್ಲರ ಮನ ಮುಟ್ಟುವಂತಿದೆ ಎಂದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿಯ ನಿರ್ದೇಶಕ ಎಂ.ಎಸ್.ಸುಧೀರ್ ಮಾತನಾಡಿ, ನಮ್ಮ ಸಂಸ್ಥೆಯ ಗಾಯಕಿಯೂ ಆದ ವೈಷ್ಣವಿ, ಬೆಂಗಳೂರಲ್ಲಿ ಟಿ.ಎನ್.ಸೀತಾರಾಮ್, ಜೋಗಿ ಮುಂತಾದ ಗಣ್ಯರ ಗರಡಿಯಲ್ಲಿ ಪಳಗಿ ಅನುಭವ ಗಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಚಿನ್ನದ ಸರ, ಎಂಥವರನ್ನೂ ನಿಂತು ನೋಡುವಂತೆ ಮಾಡುವ ಆಕರ್ಷಣೆ ಹೊಂದಿರುವ ಕಿರುಚಿತ್ರ ಎಂದರು.
ತೋಟಗಾರಿಕೆ ಇಲಾಖೆಯ ದೀಪಕ್ ಹಿರೇಮಗಳೂರು, ತೊಗರಿಹಂಕಲ್‌ನ ಶಿಕ್ಷಕಿ ಸುನೀತಾ ಉಪಸ್ಥಿತರಿದ್ದರು. ಸುಶೀಲಮ್ಮ, ಕೇದಾರ್, ಕಮಲಾಕ್ಷಿ, ಉಪಸ್ಥಿತರಿದ್ದರು. ರೇಖಾ ನಾಗರಾಜರಾವ್ ಸ್ವಾಗತಿಸಿದರು. ನಾಗರಾಜರಾವ್ ಕಲ್ಕಟ್ಟೆ ವಂದಿಸಿದರು. ಇದೇ ವೇಳೆ ಚಿನ್ನದ ಸರ ಕಿರುಚಿತ್ರದ ಪ್ರದರ್ಶನ ನಡೆಯಿತು.



