gopal 1

 

 

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರಿಗೆ ಅವರ ಸ್ನೇಹಬಳಗದಿಂದ ಅದ್ದೂರಿ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.

ಅವರ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ, ಅವರಿಗೆ  ಜುಲೈ 19 ಮೈಸೂರು ನಗರದ ಕಲಾಭವನದಲ್ಲಿ ಭವ್ಯ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ನಾಡು, ನುಡಿ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಮಡ್ಡೀಕೆರೆ ಗೋಪಾಲ್ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಗೌರವಿಸುವ ಸಲುವಾಗಿ ವಿವಿಧ ಸಂಘಟನೆಗಳು, ಸಾಹಿತಿಗಳು ಹಾಗೂ ಅವರ ಅಭಿಮಾನಿ ಬಳಗದ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಖ್ಯಾತ ಸಾಹಿತಿ ಹಂ.ಪ.ನಾಗರಾಜಯ್ಯನವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿ ; ಮಡ್ಡೀಕೆರೆ ಗೋಪಾಲ್ ಅವರು ಮಲೆನಾಡಿನ ಮೂಡಿಗೆರೆಯಿಂದ ಮೈಸೂರಿಗೆ ಬಂದು ಇಲ್ಲಿ ತಮ್ಮ ಛಾಪು ಮೂಡಿಸಿರುವುದು ಒಂದು ವಿಶೇಷ. ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪೋಷಕರಾಗಿ ಸಾವಿರಾರು ಮಂದಿಗೆ ದಾರಿದೀಪವಾಗಿದ್ದಾರೆ. ಮೈಸೂರು ಮತ್ತು ರಾಜ್ಯದ ಸಾಂಸ್ಕೃತಿಕ ವಲಯಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದರು.

ಅಭಿನಂದನಾ ನುಡಿಗಳನ್ನು ಆಡಿದ ಖ್ಯಾತ ಸಾಹಿತಿ ಪ್ರೊ. ಸಿ. ನಾಗಣ್ಣ ; ಮೈಸೂರಿನಿಂದ ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆ ಕಡೆಗೆ ಸಾಗಿದ್ದು, ಮೂಡಿಗೆರೆಯ ಮಡ್ಡೀಕೆರೆ ಗೋಪಾಲ್ ಅವರು ಮೈಸೂರಿಗೆ ಬಂದದ್ದು ಎರಡು ದೊಡ್ಡ ಸ್ಥಿತ್ಯಂತರಗಳು. ತೇಜಸ್ವಿ ಮೂಡಿಗೆರೆಯಲ್ಲಿ ನೆಲೆಸಿ ಮಲೆನಾಡು ಮತ್ತು ಪ್ರಕೃತಿಯನ್ನು ತಮ್ಮ ಸಾಹಿತ್ಯದಲ್ಲಿ ಪ್ರತಿಬಿಂಬಿಸಿದರು. ಹಾಗೆಯೇ ಮಡ್ಡೀಕೆರೆ ಗೋಪಾಲ್ ಅವರು ಮೈಸೂರಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಹುರುಪನ್ನು ತುಂಬಿದರು. ಮಡ್ಡೀಕೆರೆ ಗೋಪಾಲ್ ಅವರು ವಿಭಿನ್ನ ನೆಲೆಯಲ್ಲಿ ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪಸರಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನು ಆಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ, ಇಳೈ ಆಳ್ವಾರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನಪರಿಷತ್‌ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ರಘು ಕೌಟಿಲ್ಯ, ಹಿರಿಯ ಸಾಹಿತಿ ಸಿಪಿಕೆ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಅಭಿನಂದನಾ ಸಮಿತಿ ಅಧ್ಯಕ್ಷ ರಾಜಶೇಖರ ಕದಂಬ, ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾ ಅಧ್ಯಕ್ಷ ನಾಗರಾಜ ವಿ. ಬೈರಿ, ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಮುಖಂಡರಾದ ಎಂ. ಚಂದ್ರಶೇಖರ್‌, ವೈ.ಡಿ. ರಾಜಣ್ಣ, ಗುಬ್ಬಿಗೂಡು ರಮೇಶ್‌, ವಸಂತಕುಮಾರ್‌ ತಿಮಕಾಪುರ, ಕೆ. ರಘುರಾಂ ವಾಜಪೇಯಿ, ಮೂಗೂರು ನಂಜುಂಡಸ್ವಾಮಿ, ಕೆ.ಎಸ್. ಶಿವರಾಂ, ಮ.ನ. ಲತಾ ಮೋಹನ್‌, ಪ್ರಗತಿ ಗೋಪಾಲಕೃಷ್ಣ, ಎಂ. ಮೋಹನಕುಮಾರ್‌ ಗೌಡ, ಡೈರಿ ವೆಂಕಟೇಶ್‌, ಮೈ.ನಾ. ಲೋಕೇಶ್‌, ಎಡೆಯೂರು ಸಮೀವುಲ್ಲಾ, ಎಸ್‌.ಪಿ. ಯೋಗಣ್ಣ ಇದ್ದರು.

ಇದೇ ಸಂದರ್ಭದಲ್ಲಿ “ಮಡ್ಡೀಕೆರೆ ಮಾಣಿಕ್ಯ ನಮ್ಮ ಗೋಪಾಲ್” ಅಭಿನಂದನಾ ಗ್ರಂಥ, “ಹೃದಯವಂತ” ಕೃತಿ, “ಕಥಾಗುಚ್ಚ” ಕಥಾ ಸಂಕಲನ, “ಸ್ನೇಹಶೀಲ” ಕಾವ್ಯಾಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮಡ್ಡೀಕೆರೆ ಗುರುವಪ್ಪಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಡ್ಡೀಕೆರೆ ಗೋಪಾಲ್ ಹಾಗೂ ಅವರ ಧರ್ಮಪತ್ನಿ ಡಾ. ಅನಸೂಯ ಅವರಿಗೆ ಅಭಿನಂದನಾ ಸಮಿತಿ, ಅಪಾರ ಪ್ರಮಾಣದ ಅಭಿಮಾನಿಗಳು ಸನ್ಮಾನಿಸಿದರು. ಮೂಡಿಗೆರೆಯಿಂದ ಆಗಮಿಸಿದ್ದ ನಾಡಪ್ರಭು ಕೆಂಪೇಗೌಡ ಒಕ್ಕಲಿಗ ವೇದಿಕೆಯ ಪದಾಧಿಕಾರಿಗಳು, ಲಯನ್ಸ್ ಸಂಸ್ಥೆ ಪದಾಧಿಕಾರಿಗಳು,  ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಮತ್ತವರ ಸ್ನೇಹಿತರು, ರೈತಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್, ಮಡ್ಡೀಕೆರೆ ಗ್ರಾಮಸ್ಥರು, ಕುಟುಂಬದ ಸದಸ್ಯರು, ಬಂಧುಗಳು ಅಭಿನಂದಿಸಿದರು.

ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ. ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೈ.ಡಿ. ರಾಜಣ್ಣ ಆಶಯ ನುಡಿಗಳನ್ನಾಡಿದರು.

ಮೈಸೂರಿನ ಕಲಾಭವನದಲ್ಲಿ ತುಂಬಿತುಳುಕುವಷ್ಟು ಜನಸಾಗರ ಸೇರಿತ್ತು. ಎಲ್ಲಾ ಸಮುದಾಯದ ಜನರು ಇಲ್ಲಿ ಸಂಭ್ರಮದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಗೋಪಾಲ್ ಅವರ ಸಹೋದರ ಮಡ್ಡೀಕೆರೆ ನಾಗೇಶ್ ಅವರ ನೇತೃತ್ವದಲ್ಲಿ ಹುಟ್ಟೂರು ಮೂಡಿಗೆರೆ ತಾಲ್ಲೂಕು ಮಡ್ಡಿಕೆರೆ ಗ್ರಾಮ ಹಾಗೂ ಮೂಡಿಗೆರೆ ಚಿಕ್ಕಮಗಳೂರು ಭಾಗದಿಂದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕ್ಷೀಕರಿಸಿದರು.

ಮಡ್ಡೀಕೆರೆ ಗೋಪಾಲ್ ಅವರು ಮೂಲತಃ ಮೂಡಿಗೆರೆ ತಾಲ್ಲೂಕಿನ ಮಡ್ಡೀಕೆರೆ ಗ್ರಾಮದವರಾಗಿದ್ದು, ಮಡ್ಡೀಕೆರೆ ದಿವಂಗತ ಸೋಮೇಗೌಡ ಮತ್ತು ಶ್ರೀಮತಿ ಹಾಲಮ್ಮ ದಂಪತಿಗಳು ಪುತ್ರರು. ಅವರು  ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು, ಎರಡನೇ ಅವಧಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ