ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಗ್ರಾಮದ ವಿವಿಧ ಮನೆಗಳಲ್ಲಿ 70 ವರ್ಷದಿಂದ ವಾಸವಾಗಿ ಗ್ರಾಮಸ್ಥರ ಸೇವೆಯಲ್ಲಿ ತೊಡಗಿದ್ದ ಅಚ್ಚುತ ಆಚಾರಿ (78) ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಬುಧವಾರ ಗ್ರಾಮದ 3 ಮನೆಗಳಲ್ಲಿ ಊಟ ಮಾಡಿ ಇನ್ನೊಂದು ಮನೆಯಲ್ಲಿ ಮಲಗಿದ್ದ ಬೆಳಿಗ್ಗೆ ಏಳಲೇ ಇಲ್ಲ. ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ವಿಷಯ ತಿಳಿದ ಕೂಡಲೆ ಗ್ರಾಮದ ನಿವಾಸಿಗಳಾದ ಕಿರುಗುಂದ ಅಬ್ಬಾಸ್, ಯು.ಎಚ್.ರಾಜಶೇಖರ್, ಕೆ.ಆರ್.ದಿನೇಶ್ ಅವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೆಂಗಳೂರಿನಿಂದ ತಂದಿರುವ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮೃತದೇಹವನ್ನಿಟ್ಟು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಯಾರಿವರು ಅಚ್ಚುತ ಆಚಾರಿ ?
ಅಚ್ಚುತ ಆಚಾರಿ ಮೂಲಕ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದವರು, ಅವರು ತಮ್ಮ ಸ್ನೇಹಿತನೊಂದಿಗೆ 70 ವರ್ಷದ ಹಿಂದೆ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದಾರೆ. ಹುಲ್ಲು ಸಂಪೂರ್ಣವಾಗಿ ಬೆಂಕಿಯಲ್ಲಿ ಆಹುತಿಯಾದಾಗ. ಮನೆಯವರು ಹೊಡೆಯುತ್ತಾರೆ ಎಂದು ಜಾನುವಾರ ಮೇಯಿಸುತ್ತಿದ್ದ ಇಬ್ಬರು ಮಕ್ಕಳು ಓಡಿತಪ್ಪಿಸಿಕೊಂಡು ಬೇರೆ ಬೇರೆ ಲಾರಿಗೆ ಹತ್ತಿದ್ದಾರೆ. ಅಚ್ಯುತ ಆಚಾರಿಯನ್ನು ಮೂಡಿಗೆರೆ ಸಮೀಪದ ಹ್ಯಾಂಡ್ ಪೆÇೀಸ್ಟ್ ವೃತ್ತದ ಬಳಿ ಲಾರಿಯಿಂದ ಇಳಿಸಿದ್ದಾರೆ. ಮಳೆಗೆ ಸಿಲುಕಿದ ಅಚ್ಚುತ ಆಚಾರಿ ಹಸಿವಿನಿಂದ ಚಳಿಯಲ್ಲಿ ನಡುಗುತ್ತಾ ನಿಂತಿದ್ದನ್ನು ಗಮನಿಸಿದ ಕಿರುಗುಂದ ಗ್ರಾಮದ ಹಿರಿಯ ಮುಖಂಡ ಎಂ.ಎ.ರಜಾಕ್ ಅವರು ಬೈಕ್ ಹತ್ತುವಂತೆ ತಿಳಿಸಿದಾಗ ನನಗೆ ಕೆಲಸ ಕೊಟ್ಟರೆ ಮಾತ್ರ ಬರುತ್ತೇನೆ ಎಂದು ಅಳುತ್ತಾ ನಿಂತಾಗ ಆಯ್ತು ನಿನಗೆ ಕೆಲಸ ಕೊಡುತ್ತೇನೆ ಎಂದು ತಿಳಿಸಿ ತಮ್ಮ ಬೈಕಿನಲ್ಲಿ ಕಿರುಗುಂದ ಗ್ರಾಮಕ್ಕೆ ಕರೆತಂದಿದ್ದಾರೆ.
ಅಂದಿನಿಂದ ಗ್ರಾಮದ ಎಲ್ಲಾ ಮನೆಗಳಲ್ಲೂ ಊಟ ಮಾಡಿಕೊಳ್ಳುತ್ತಿದ್ದ, ಪ್ರತಿ ಮನೆಯ ಕೆಲಸಗಳನ್ನು ಮಾಡಿಕೊಡುತ್ತಿದ್ದ, ಪ್ರತಿ ಮನೆಯವರೂ ಈತನ ಕೈಲಿ ತಮಗೆ ಬೇಕಾದ ಬಟ್ಟೆ, ಹಣ್ಣು, ತರಕಾರಿ, ಸೇರಿದಂತೆ ಪ್ರತಿ ಮನೆಗಳಿಗೆ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಪ್ರತಿ ಮನೆಯ ಸೇವೆಯಲ್ಲಿ ತೊಡಗಿದ್ದ. ಅಚ್ಚುತ ಆಚಾರಿ ಇಲ್ಲದೆ ಕಿರುಗುಂದ ಗ್ರಾಮದ ಮನೆಗಳಲ್ಲಿ ಯಾವುದೆ ಕೆಲಸ ನಡೆಯುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಬೇಕಾದವನಾಗಿದ್ದರು.
ಅವರು ಅನಾರೋಗ್ಯದಿಂದ ಗುರುವಾರ ಆಸ್ಪತ್ರೆಗೆ ಸೇರಿದಾಗ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಪ್ರತಿಯೊಬ್ಬರು ಕಣ್ಣೀರು ಹಾಕಿದ್ದರು. ಸೋಮವಾರ ಬೆಂಗಳೂರಿನಿಂದ ಅಚ್ಚುತ ಆಚಾರಿ ಅವರ ಮೃತದೇಹ ಕಿರುಗುಂದ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಸಕಲ ರೀತಿಯ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿದರು. ಭಾನುವಾರ ಸಂಜೆ ಗ್ರಾಮಸ್ಥರು ಸಭೆ ನಡೆಸಿ ಅಂತ್ಯಕ್ರಿಯೆ ಬಗ್ಗೆ ರೂಪುರೇಶ ರೂಪಿಸಿದ್ದರು. ಅಚ್ಚುತ ಆಚಾರಿಯ ನಿಧನದಿಂದ ಗ್ರಾಮದಲ್ಲಿ ಗಾಡ ಮೌನ ಆವರಿಸಿದೆ. ಅವಿವಾಹಿತರಾಗಿದ್ದ ಅವರು ಪಾಲಕರು ಮತ್ತು ಕುಟುಂಬವನ್ನು ನೋಡಲು ಒಮ್ಮೆಯೂ ಹೋಗಿಲ್ಲ. ಗ್ರಾಮಸ್ಥರು ಅವರಿಗೆ ಆಧಾರ ಸ್ತಂಭವಾಗಿದ್ದರೆ, ಗ್ರಾಮಸ್ಥರಿಗೆ ಅಚ್ಚುತ ಆಚಾರಿ ಅವರು ವರದಾನವಾಗಿದ್ದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷರಾದ ನಜೀರ್, ರಾಜಶೇಖರ್, ಹೇಮಶೇಖರ್, ಪತ್ರಕರ್ತ ಕಿರುಗುಂದ ಅಬ್ಬಾಸ್, ಪಿಡಿಓ ಕೃಷ್ಣಪ್ಪ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಿ.ಎಸ್.ಓಂಕಾರ್, ಗುಲಾಂ ಮಹಮ್ಮದ್, ಪ್ರೇಮ ಮಂಜುನಾಥ್, ನಾಗರತ್ನ, ಚೇತನ್, ಕೆ.ಆರ್.ಲೋಕೇಶ್, ಚನ್ನಕೇಶವ, ಮಂಜುನಾಥ್, ಕೆ.ಕೆ.ರಾಮಯ್ಯ, ಯು.ಬಿ.ಮಂಜಯ್ಯ ಸಂತಾಪ ಸೂಚಿಸಿದ್ದಾರೆ.


