ಕೇಂದ್ರ ಬಿಜೆಪಿ ಸರ್ಕಾರ 2014 ರಿಂದ 2026 ರವರೆಗೆ ಅಧಿಕಾರಕ್ಕೆ ಬಂದಾಗಿನಿಂದಲೂ ಇದುವರೆಗೂ ಸುಮಾರು 152 ಬಾರಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೂ ಇದುವರೆಗೂ ಇದರ ಜವಾಬ್ದಾರಿ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಧಿಕಾರಕ್ಕೆ ಅಂಟಿಕೊಂಡು ರಾಜೀನಾಮೆ ನೀಡಿಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿರುವ ಕೇಂದ್ರ ಬಿಜೆಪಿ ಸರ್ಕಾರ ಅನೇಕ ವಿದ್ಯಾರ್ಥಿಗಳ ಪ್ರಾಣವನ್ನೇ ತೆಗೆದುಕೊಂಡಿದೆ. ಕೇಂದ್ರ ಬಿಜೆಪಿ ಸರ್ಕಾರವನ್ನು ವಿದ್ಯಾರ್ಥಿಗಳ ಬಲಿ ಪಡೆದ ಬಿಜೆಪಿ ಕೇಂದ್ರ ಸರ್ಕಾರ ಎಂದು ಕರೆಯಬೇಕಾಗಿದೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿರಂತರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಕ್ತಾರ ಎ.ಎಸ್.ಮಹೇಶ್ವರಪ್ಪ ಮಾತನಾಡಿ, ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಉದ್ದಾರಕ್ಕಿಂತಲೂ ಆಯೋಧ್ಯೆ ಶ್ರೀರಾಮನ ಟ್ರಸ್ಟ್‍ನ ಹೆಸರಿನಲ್ಲಿ ಲೂಟಿ ಮಾಡಿದ್ದೇ ಸಾಧನೆ. ಶ್ರೀರಾಮನ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿಯಾಗಿದ್ದರೂ ಕೂಡ ಇದುವರೆಗೂ ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ ಎಂದು ದೂರಿದರು.
ನಾವುಗಳು ಭ್ರಷ್ಟಾಚಾರಿಗಳ ವಿರೋಧಿಗಳು ಎನ್ನುವ ಇವರು ಶ್ರೀರಾಮನ ಹೆಸರಿನಲ್ಲಿ ಲೂಟಿ ಹೊಡೆದ ಭ್ರಷ್ಟಾಚಾರವನ್ನು ಬಿಜೆಪಿ ಒಪ್ಪಿಕೊಳ್ಮ್ಳ ತ್ತದೆಯೇ ಭೂಮಿ ಪೂಜೆಯಿಂದ ಮಂದಿರ ಉದ್ಘಾಟನೆವರೆಗಿನ ಪ್ರತಿಯೊಂದು ಧಾರ್ಮಿಕ ಆಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೆ, ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ಟ್ರಸ್ಟ್‍ನ ಪ್ರಮುಖರು ನೀಡಿದ ರಾಜೀನಾಮೆ ಅಂಗೀಕಾರವಾಗಿಲ್ಲ. ಎಸ್‍ಐಟಿ ತನಿಖಾ ವರದಿಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಬಿಟ್ಟು ಕಾರು ಚಾಲಕ, ಸೆಕ್ಯೂರಿಟಿ ಗಾರ್ಡ್, ಹುಂಡಿ ಏಣಿಕೆ ಮಾಡುವಂತ ಆರು ಜನರನ್ನು ಮಾತ್ರ ಸೇರಿಸಲಾಗಿದೆ. ತನಿಖಾ ವರದಿಯು ಪಾರದರ್ಶಕವಾಗಿಲ್ಲ ಎಂದು ತಿಳಿಸಿದರು.
ಆದ್ದರಿಂದ ಈ ಪ್ರಕರಣದ ಬಗ್ಗೆ ಎಸ್‍ಐಟಿಯ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಹಾಗೂ ರಾಮ ಮಂದಿರದ ಹುಂಡಿ ಹಗರಣವನ್ನು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಆರ್.ಚಂದ್ರು, ಜಿಲ್ಲಾ ಸಂಯೋಜಕ ಹೆಚ್.ಸಿ.ಗಂಗಾಧರ್ ಉಪಸ್ಥಿತರಿದ್ದರು.


