ಮೂಡಿಗೆರೆ ತಾಲ್ಲೂಕಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗೋಣಿಬೀಡು ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಎಸ್. ರಮೇಶ್ ಆಗ್ರಹಿಸಿದ್ದಾರೆ.
ಅವರು ಭಾನುವಾರ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೊಸಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜೀವನಕ್ಕಾಗಿ ಬೆಳೆಗಾರರು ತಲಾತಲಾಂತರದಿಂದ ಕಾಫಿ ಬೆಳೆಯನ್ನೆ ಅವಲಂಬಿಸಿಕೊಂಡು ಹೋಗುತ್ತಿದ್ದು, ಬ್ಯಾಂಕು ಮತ್ತು ಪೈನಾನ್ಸ್ ಗಳಲ್ಲಿ ತೋಟದ ಮೇಲೆ ಸಾಲ ತಂದು ಗೊಬ್ಬರ, ಕಾರ್ಮಿಕರ ಸಂಬಳ , ಟ್ಯಾಕ್ಸ್ ಗಳನ್ನು ಕಟ್ಟುತ್ತಾ ಜೀವನ ನಡೆಸುತ್ತಿದ್ದಾರೆ ನೋಡುವವರ ಕಣ್ಣಿಗೆ ದೊಡ್ಡ ಬೆಳೆಗಾರರು ಆದರೇ ಅವರ ನೋವು ಅರಿಯುವವರೇ ಇಲ್ಲದಂತಾಗಿದೆ. ಇನ್ನೇನು ಫಸಲು ಕೈಗೆ ಬಂತು ಈ ಬಾರಿ ಸ್ವಲ್ಪ ಸಾಲದ ಜಮಾ ಮಾಡೋಣಾಂತ ಅಂದು ಕೊಳ್ಳುವಷ್ಟರಲ್ಲಿ ಕಾಡಾನೆಗಳು, ಕಾಡುಕೋಣ ಮುಂತಾದ ಕಾಡುಪ್ರಾಣಿಗಳಿಂದ ಬೆಳೆಗೆ ಸಂಚಕಾರ ಬರುತ್ತಿದೆ. ಇತ್ತ ಬ್ಯಾಂಕುಗಳು ಸರ್ಫೇಸಿ ಕಾಯ್ದೆಯ ನ್ನು ತಂದು ಜಮೀನುಗಳನ್ನು ಹರಾಜು ಮಾಡುತ್ತಿರುವ ಕಾರಣ ಬೆಳೆಗಾರರು ಬೀದಿಗೆ ಬೀಳುವಂತೆ ಮಾಡಿದೆ.
ಗೋಣಿಬೀಡು ಹೋಬಳಿಯಲ್ಲಿ ಕಾಡಾನೆಗಳ ದಾಂಧಲೆಗೆ ಬೆಳೆಗಾರರು, ಕಾರ್ಮಿಕರು ಹಾಗೂ ಸಾರ್ವಜನಿಕರು ನಲುಗಿ ಹೋಗಿದ್ದು. ಲಕ್ಷಾಂತರ ರೂ ನಷ್ಟವನು ಉಂಟುಮಾಡಿದೆ.
ಕಾಡಾನೆಗಳ ಕಾಟದಿಂದ ನಮ್ಮನ್ನು ರಕ್ಷಿಸಿ ನಮಗೆ ಶಾಶ್ವತ ಪರಿಹಾರ ನೀಡಿ ಎಂದು ಹೋಬಳಿ ಬೆಳೆಗಾರರ ಸಂಘದ ನಿರ್ದೆಶಕರುಗಳಾದ ರಂಜಿತ್, ಸಿ.ಎಸ್.ಚಂದ್ರಶೇಖರ್, ದಯಾನಂದ್ , ಎಚ್.ಕೆ.ಪೂರ್ಣೆಶ್, ಎಚ್.ಕೆ.ಯೋಗೇಶ್, ದರ್ಶನ್, ಸಂತೋಷ್ ಆದರ್ಶ್ ಒತ್ತಾಯಿಸಿದರು.
ಗೋಣಿಬೀಡು ಹೋಬಳಿಯ ಜಿ.ಹೊಸಳ್ಳಿ ಗ್ರಾಮದಲ್ಲಿರುವ ಧರ್ಮಣ್ಣ, ಶಂಕರ್, ರಾಮಚಂದ್ರ ಅವರ ತೋಟಗಳಿಗೆ ಅಧಿಕ ಸಂಖ್ಯೆಯಲ್ಲಿ ನುಗ್ಗಿರುವ ಕಾಡಾನೆಗಳು ಬೆಳೆ ಹಾನಿ ಮಾಡಿದ್ದು ಅಧಿಕ ನಷ್ಟವನ್ನುಂಟು ಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅಧಿಕಾರಿಗಳು ಆಗಮಿಸಿ ಕಾಡಾನೆಗಳನ್ನು ಕಾಡಿನತ್ತ ಓಡಿಸುತ್ತಿದ್ದಾರೆ. ಆನೆ ಕಾರಿಡಾರ್ ಮಾಡಿ ಮಲೆನಾಡಿಗರ ತೋಟ ಗದ್ದೆಗಳನ್ನು ಉಳಿಸಿ ಅಮಾಯಕರ ಪ್ರಾಣ ಉಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದೆ ಬರಬೇಕಾಗಿದೆ.
- ಡಿ.ಎಸ್.ರಮೇಶ್, ಗೋಣಿಬೀಡು ಬೆಳೆಗಾರರ ಸಂಘದ ಅಧ್ಯಕ್ಷರು
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಾಡು ಪ್ರಾಣಿಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಿರಂತರವಾಗಿ ರಾತ್ರಿ ಹಗಲು ಎನ್ನದೆ ಕಾರ್ಯಮಾಡುತ್ತಿದೆ. ಆದರೆ ಆಹಾರದ ಕೊರತೆಯಿಂದ ಪ್ರಾಣಿಗಳು ಕಾಡಂಚಿನಲ್ಲಿರುವ ತೋಟಗಳ ಮೂಲಕ ಆಗಮಿಸಿ ಗ್ರಾಮ ಮತ್ತು ನಗರಗಳತ್ತ ಮುಖ ಮಾಡುತ್ತಿವೆ. ಸರ್ಕಾರಗಳು ಕಾಡು ಪ್ರಾಣಿಗಳನ್ನು ಅದರಲ್ಲೂ ಕಾಡಾನೆಗಳನ್ನು ನಾಡಿನಡೆ ಬಾರದ ಹಾಗೆ ಕಾಡಿನಲ್ಲೆ ಆಹಾರ ದೊರೆಯುವ ವ್ಯವಸ್ಥೆ ಮಾಡಿ ಶಾಶ್ವತ ಪರಿಹಾರ ನೀಡಿದರೆ ಮಾತ್ರ ಬೆಳೆಗಾರರು , ಕಾರ್ಮಿಕರು ಮತ್ತು ಸಾರ್ವಜನಿಕರು ಉಸಿರಾಡಲು ಸಾಧ್ಯ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರ ಗಮನಕ್ಕೆ ತಂದಿದ್ದು ವಿಧಾನಸಭೆಯಲ್ಲಿ ಇದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
- ಬಿ.ಕೆ.ಚಂದ್ರಶೇಖರ್, ಗೋಣಿಬೀಡು ಬೆಳೆಗಾರರ ಸಂಘದ ಕಾರ್ಯದರ್ಶಿ



