ಮೂಡಿಗೆರೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ಅಪ್ರಾಪ್ತರ ನಡುವಿನ ಪ್ರೇಮ ಪ್ರಕರಣ ; ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು, ಪಟ್ಟಣದಲ್ಲಿ ಪೊಲೀಸರ ಕಟ್ಟೆಚ್ಚರ
ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಗುಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಬಾಲಕನ ವಿರುದ್ಧ ಪೋಕ್ಸೋ ಕಾಯಿದೆಯಡಿ ಸೋಮವಾರ ಪ್ರಕರಣ ದಾಖಲಾಗಿದೆ.
ಪೋಷಕರ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಬಾಲಕಿ ಹಿಂದೂ ಹಾಗೂ ಬಾಲಕ ಮುಸ್ಲಿಂ ಆಗಿದ್ದರಿಂದ ಈ ಪ್ರಕರಣ ಸಾಕಷ್ಟು ಗೊಂದಲ, ಘರ್ಷಣೆಗೆ ಅವಕಾಶ ಮಾಡಿಕೊಟ್ಟಿದೆ.
ಈ ಹಿನ್ನಲೆಯಲ್ಲಿ ಪೊಲೀಸರು ಒಂದೆಡೆ ಪೋಕ್ಸೋ, ಮತ್ತೊಂದೆಡೆ ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ಯಾವುದೇ ಗಲಭೆ ಸೃಷ್ಟಿಯಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಕಳೆದ ವರ್ಷ ಒಂದೇ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿ ಮತ್ತು ಬಾಲಕ ಇವರಿಬ್ಬರ ನಡುವೆ ಆಕರ್ಷಣೆ ಪ್ರೀತಿ ಹುಟ್ಟಿದೆನ್ನಲಾಗಿದೆ. ಪಿಯುಸಿ ವ್ಯಾಸಾಂಗಕ್ಕೆ ಕಾಲೇಜು ಮೆಟ್ಟಿಲೇರಿದ ಬಳಿಕ ಇಬ್ಬರೂ ಬೇರೆ ಬೇರೆಯಾಗಿದ್ದು, ಮೊಬೈಲ್ ಮೂಲಕ ಪುನಃ ಸಂಪರ್ಕವಾಗಿದೆ. ಕಳೆದ 6 ತಿಂಗಳ ಹಿಂದೆ ಇವರಿಬ್ಬರ ಪ್ರೀತಿ ವಿಚಾರ ಪೋಷಕರಿಗೆ ತಿಳಿದಿದೆ. ಇಬ್ಬರೂ ಅನ್ಯ ಧರ್ಮಕ್ಕೆ ಸೇರಿದ್ದರಿಂದ ಇಬ್ಬರ ಪೋಷಕರು ಶಾಂತಿಯುತವಾಗಿ ಮಾತುಕತೆ ನಡೆಸಿ, ಈ ಆಕರ್ಷಣೆ ಪ್ರೀತಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿದ್ದಾರೆ.
ಆದರೂ ಇವರಿಬ್ಬರು ಮತ್ತೆ ಮೊಬೈಲ್ ಮೂಲಕ ಸಂಪರ್ಕವಾಗಿ ಪ್ರೀತಿ ಮುಂದುವರೆದಿದೆ. ಇದರಿಂದ ಬೇಸತ್ತ ಬಾಲಕಿ ಪೋಷಕರಿಗೆ ದಿಕ್ಕು ತೋಚದೇ ಈ ವಿಚಾರವನ್ನು ಹಿಂದೂ ಸಂಘಟನೆ ಮುಖಂಡರಿಗೆ ತಿಳಿಸಿದ್ದಾರೆ. ಘಟನೆ ವಿಚಾರವಾಗಿ ಸೋಮವಾರ ಸಂಜೆ ಇಬ್ಬರ ಪೋಷಕರ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಮುಖಂಡರು ಬಾಲಕನ ಬಳಿಯಿದ್ದ ಮೊಬೈಲ್‍ನ್ನು ಕಿತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಬಾಲಕಿ ಪೋಷಕರು ಬಾಲಕ ಹಾಗೂ ಅವರ ಪೋಷಕರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಬಾಲಕನ ಪೋಷಕರು ಕೂಡ ಬಾಲಕಿಯ ಪೋಷಕರು, ಸಂಬಂಧಿಕರು ಮತ್ತು ಹಿಂದೂ ಸಂಘಟನೆ ಮುಖಂಡರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



