ಕಳಸ ವ್ಯಾಪ್ತಿಯ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ ಎಡದಾಳು ದಿನೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಮಿತಿಯ ನಿರ್ದೇಶಕರಾಗಿ ರಂಗನಾಥ್, ರವೀಂದ್ರ ಶೆಟ್ಟಿ ಕೆಳಂಗಡಿ, ಸುಧೀರ್ ಅಬ್ಬುಗುಡಿಗೆ, ಸುಮನಾ ಜಯರಾಜ್, ಪೂರ್ಣಿಮಾ ಅಶೋಕ್, ರಿಜ್ವಾನ್, ಶರಾವತಿ ರವಿರಾಜ್, ಸರಸ್ವತಿ ಜಗನ್ನಾಥ್, ಭಾರತಿ ಅವಿರೋಧವಾಗಿ ಆಯ್ಕೆ ಆದರು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಒಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಮೋಹನ್ ಅವರು ನಿರ್ದೇಶಕರಾಗಿ ಆಯ್ಕೆಯಾದರು. ಮೋಹನ್ ಅವರಿಗೆ 552 ಮತಗಳು, ಪ್ರತಿಸ್ಪರ್ಧಿಗಳಾಗಿದ್ದ ಮಂಜುನಾಥ್ ಅವರಿಗೆ 338 ಮತಗಳು ಬಿದ್ದರೆ ಸೋಮಯ್ಯ ಅವರಿಗೆ 95 ಮತಗಳು ದಕ್ಕಿದವು.
ಯಶಸ್ವಿಯಾಗಿ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆಯ ನ್ನು ಶ್ರೀ ಕಲಶೇಶ್ವರ ಗ್ರಾಮ ಅರಣ್ಯ ಸಮಿತಿ 25 ವರ್ಷಗಳಿಂದ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಾಳೆಹೊನ್ನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಮೋಹನ್ ಕುಮಾರ್ ಹೇಳಿದರು. ಶ್ರೀ ಕಲಶೇಶ್ವರ ಗ್ರಾಮ ಅರಣ್ಯ ಸಮಿತಿಯ 25ನೇ ವರ್ಷದ ಸರ್ವ ಸದಸ್ಯರ ಮಹಾ ಮಂ ಡಳಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕಲಶೇಶ್ವರ ಗ್ರಾಮ ಅರಣ್ಯ ಸಮಿತಿಯು ಪರಿಸರಕ್ಕೆ ಪೂರಕವಾದ ಸಾಮಾಜಿಕ ಚುಟವಟಿಕೆಗಳ ಮಾದರಿಯಾಗಿದೆ ಎಂದರು.
ಕಳಸ ವಲಯ ಅರಣ್ಯಾಧಿಕಾರಿ ಎಂ.ಎನ್.ನಿಶ್ವಿತ್ ಮಾತನಾಡಿ ಹಿಂದಿನ ಗ್ರಾಮ ಅರಣ್ಯ ಸಮಿತಿಯು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ನೂತನ ಗ್ರಾಮ ಅರಣ್ಯ ಸಮಿತಿ ಉತ್ತಮವಾಗಿ ಹಾಗೂ ಸರ್ಕಾರದ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಅರಣ್ಯ ಭವನದ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ಮಾತನಾಡಿ ಕೇಂದ್ರ ಸರ್ಕಾರದ ಪುರಸ್ಕøತ ಯೋಜನೆ ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮ ಫಾರೆಸ್ಟ್ ಡೆವಲಪ್‍ಮೆಂಟ್ ಏಜೆನ್ಸಿ ಎನ್. ಎ.ಪಿ., ಎಫ್.ಡಿ.ಎ ಯೋಜನೆಯಡಿಯಲ್ಲಿ ಕಳೆದ 25 ವರ್ಷಗಳಿಂದ ರಚನೆಯಾಗಿದ್ದ ಶ್ರೀ ಕಲಶೇಶ್ವರ ಗ್ರಾಮ ಅರಣ್ಯ ಸಮಿತಿ ಮಾದರಿಯಾಗಿ ಕಾರ್ಯನಿರ್ವಹಿಸಿದೆ ಎಂದ ಅವರು. ನಿಸ್ವಾರ್ಥ ಸಮಾಜಸೇವೆ ಸಲ್ಲಿಸಿದ ಸಮಿತಿ ಹಿಂದಿನ ಅಧ್ಯಕ್ಷ ರುದ್ರಯ್ಯ ಆಚಾರ್‍ರವರಿಗೆ ಸಾಲುಮರದ ತಿಮ್ಮಕ್ಕ ಸದ್ಭಾವನಾ ರಾಜ್ಯ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಸದ್ಭಾವನಾ ರಾಜ್ಯ ಪ್ರಶಸ್ತಿ, ವಿಶ್ವ ಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ, ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ಬಂದಿರುವುದು ಅವರ ಕಾರ್ಯದಕ್ಷತೆಯನ್ನು ತೋರಿಸುತ್ತದೆ ಎಂದರು.
ಸಮಿತಿ ಸದಸ್ಯ ಕಾರ್ಯದರ್ಶಿ ಎನ್.ಆರ್.ಹರೀಶ್ ಮಾತನಾಡಿ ಗ್ರಾಮ ಅರಣ್ಯ ಸಮಿತಿಯಲ್ಲಿ ಒಟ್ಟು ಆರವತ್ತು ಲಕ್ಷ ರೂಪಾಯಿಗಳು ಇದ್ದು, ಅದರಲ್ಲಿ ಗ್ರಾಮ ಅರಣ್ಯ ನಿಧಿ ಮತ್ತು ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಗೆ ಜಮಾ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಡಿ.ಸಿ.ಎಫ್. ಅನುಮೋದನೆಯೊಂದಿಗೆ ಖರ್ಚು ವೆಚ್ಚಗಳನ್ನು ಭರಿಸಲಾಗಿದೆ. ಯಾವುದೇ ಲೋಪದೋಷಗಳು ಇರುವುದಿಲ್ಲ ಎಂದು ಸಿ.ಎ.ಯಿಂದ ಆಡಿಟ್ ಆಗಿದ್ದು ಜಮಾ ಮತ್ತು ಖರ್ಚಿನ ವಿವರಗಳನ್ನು ಮಂಡನೆ ಮಾಡಿದರು.
ನಿರ್ದೇಶಕ ರವೀಂದ್ರ ಶೆಟ್ಟಿ ಮಾತನಾಡಿ ಸಮಿತಿಯಿಂದ ಕೆಪಿಎಸ್ ಶಾಲೆಗೆ ಡೆಸ್ಕ್ ಕೊಟ್ಟಿರುವುದು, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಶಾಲಾ ಬಸ್ ಸೇವೆ ಒದಗಿಸಲಾಗಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಸಂಚಾರಿ ವಾಹನ ಹಾಗೂ ಚಿತಾಗಾರ ವಾಹನ ಖರೀದಿಸಲಾಗುವುದು. ಮುಂದಿನ 5 ವರ್ಷಗಳ ಸಮಗ್ರ ನಿರ್ವಹಣಾ ಯೋಜನೆಗೆ ಡಿ.ಸಿ.ಎಫ್ ಅನುಮೋದನೆಯನ್ನು ನೀಡಿದ್ದಾರೆ ಎಂದರು.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಲಕ್ಷ್ಮಣ್ ಮತ್ತು ಡಿ.ಆರ್.ಎಫ್.ಓ. ಹರೀಶ್ ಯಶಸ್ವಿಯಾಗಿ ಚುನಾವಣೆಯನ್ನು ನಡೆಸಿದರು. ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಎನ್.ಜಿ.ಓ. ಪ್ರತಿನಿಧಿ ಕಾಲಜ್ಞಾನಿ ಗೊಪಾಲ ಗೌಡ ಸ್ವಾಮಿ, ನಿರ್ಗಮಿತ ನಿರ್ದೇಶಕರಾದ ಗಣೇಶ್ ಭಟ್, ವಿಜಯಾ, ಬಾಲಕೃಷ್ಣ, ಸುವರ್ಣಮ್ಮ ಉಪಸ್ಥಿತ ರಿದ್ದರು.
ಅಬ್ಬುಗುಡಿಗೆ ಜಲಪಾತ ಹಾಗೂ ಕ್ಯಾತನಮಕ್ಕಿ ಶುಲ್ಕ ಸಂಗ್ರಹಣೆಯ ನಂತರ ಪ್ರಸಿದ್ದಿಗೆ ಬಂದಿದ್ದ, ಕಳಸ ಅರಣ್ಯ ಇಲಾಖೆಯಡಿಯಲ್ಲಿ ಬರುವ ಕಳಸೇಶ್ವರ ಗ್ರಾಮಾರಣ್ಯ ಸಮಿತಿಗೆ ಹೊಸ ಪದಾಧಿಕಾರಿಗಳ ಆಯ್ಕೆಯಾಗಿದೆ. ಇದೀಗ 24 ವರ್ಷಗಳ ಬಳಿಕ ಹೊಸ ಸಮಿತಿ ರಚನೆಯಾಗಿದ್ದು, ಸಮಿತಿಯು ಹಳೇಬೇರು ಹೊಸಚಿಗುರು ಎನ್ನುವಂತೆ ಉತ್ಸಾಹಿ ತಂಡವನ್ನೊಳಗೊಂಡಿದ್ದು, ಪರಿಸರ ಸ್ನೇಹಿ ಹಾಗೂ ಜನಸ್ನೇಹಿ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಕಳಸದ ವಿವಿಧ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳ ಮುಖಂಡರು ಶುಭಹಾರೈಸಿ ಆಶಯ ವ್ಯಕ್ತಪಡಿಸಿದ್ದಾರೆ.



