ಟಿಪ್ಪರ್ ಲಾರಿಯೊಂದು ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಿಗೆರೆ ಬೇಲೂರು ರಸ್ತೆಯ ಗೋಣಿಬೀಡು ಸಾಲುಮರ ಚರ್ಚ್ ಸಮೀಪ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.
ಹಾಸನದಿಂದ ಗೋಣಿಬೀಡು ಕಡೆಗೆ ಕೌದಿ, ಬೆಡ್ ಸೀಟ್ ಮಾರಾಟ ಮಾಡಲೆಂದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ರಾಮಕೃಷ್ಣ (40 ವರ್ಷ) ಮೃತ ದುರ್ದೈವಿ.
ದ್ವಿಚಕ್ರ ವಾಹನಕ್ಕೆ ಹಿಂಬಂದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ರಾಮಕೃಷ್ಣ ತಲೆಗೆ ಟಿಪ್ಪರ್ ಹಿಂಬದಿ ಚಕ್ರ ತಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ರಾಮಕೃಷ್ಣ ಆಂಧ್ರ ಮೂಲದವರಾಗಿದ್ದು, ಹಾಸನದಲ್ಲಿ ಕುಟುಂಬ ಸಮೇತ ನೆಲೆಸಿದ್ದರು ಮತ್ತು ದ್ವಿಚಕ್ರ ವಾಹನದಲ್ಲಿ ಕೌದಿ, ರಗ್ಗು ಹೇರಿಕೊಂಡು ಹಳ್ಳಿಗಾಡಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ಚಾಲಕ ನಿಡುವಾಳೆ ಮೂಲದ ಭರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಪ್ಪರ್ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಟಿಪ್ಪರ್ ಗಳು ಮರಳು, ಎಂ ಸ್ಯಾಂಡ್ ತುಂಬಿಸಿಕೊಂಡು ಅತಿವೇಗದಲ್ಲಿ ಚಲಿಸುತ್ತಾರೆ. ಒಂದೇ ಪರ್ಮಿಟ್ ನಲ್ಲಿ ಅಕ್ರಮವಾಗಿ ಎರಡು ಮೂರು ಲೋಡ್ ಹೊಡೆಯುತ್ತಿದ್ದು, ಅದಕ್ಕಾಗಿ ಅವರು ಮುಂಜಾನೆಯಿಂದ ರಾತ್ರಿ ವರೆಗೆ ಅತಿವೇಗದಲ್ಲಿ ವಾಹನ ಚಲಾವಣೆ ನಡೆಸುತ್ತಾರೆ. ಇದರಿಂದ ಇತರೆ ವಾಹನ ಚಾಲಕರು ಜೀವಭಯದಲ್ಲಿ ವಾಹನ ಚಾಲನೆ ಮಾಡುವಂತಾಗಿದೆ.
ಹಾಗೆಯೇ ಗೋಣಿಬೀಡಿನಿಂದ ಬೇಲೂರು ವರೆಗೆ ರಸ್ತೆ ಬಹಳ ಕಿರಿದಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ಕಂದಕ ನಿರ್ಮಾಣವಾಗಿ ವಾಹನಗಳನ್ನು ಕೆಳಗೆ ಇಳಿಸಲು ಸಾಧ್ಯವಾಗದಂತಾಗಿದೆ. ಆದಷ್ಟು ಬೇಗ ಈ ರಸ್ತೆಯನ್ನು ಅಗಲೀಕರಣ ಮಾಡಬೇಕು ಮತ್ತು ಟಿಪ್ಪರ್ ವಾಹನ ಚಾಲಕರಿಗೆ ಪೊಲೀಸ್ ಇಲಾಖೆ ಸೂಕ್ತ ನಿರ್ದೇಶನ ನೀಡಿ ಜಾಗರೂಕತೆಯಿಂದ ವಾಹನ ಚಾಲನೆ ಮಾಡಲು ಸೂಚನೆ ನೀಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



