ಕಾವೇರಿಯಲ್ಲಿ ನದಿಯಲ್ಲಿ ಫೋಟೊ ತೆಗೆಯಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮುತ್ತತ್ತಿಯ ಮುತ್ತೆತ್ತರಾಯ ದೇವಸ್ಥಾನಕ್ಕೆ ಚನ್ನಪಟ್ಟಣ ಮೂಲದ ಕುಟುಂಬವೊಂದು ಪೂಜೆಗೆ ಬಂದಿತ್ತು ಎನ್ನಲಾಗಿದೆ.
ಪೂಜೆಯ ನಂತರ ಕಾವೇರಿ ನದಿಗಿಳಿದು ನೀರಿನಲ್ಲಿ ಆಟವಾಡುತ್ತಾ ರೀಲ್ಸ್ ಗಾಗಿ ಫೋಟೋ ಮತ್ತು ವಿಡಿಯೋ ತೆಗೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ತಂಡದಲ್ಲಿ ಮಹಿಳೆಯರು ಒಬ್ಬರನ್ನೊಬ್ಬರು ಕೈಹಿಡಿದುಕೊಂಡು ನದಿಯ ಮಧ್ಯಕ್ಕೆ ತೆರಳಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲು ಪ್ರಾರಂಭಿಸಿದ್ಧಾರೆ. ಆಗ ದಡದಲ್ಲಿದ್ದ ಮಹೇಶ್ ಮಹಿಳೆಯರನ್ನು ರಕ್ಷಿಸಲು ಹೋಗಿದ್ದು, ಅವರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಐವರು ನೀರುಪಾಲಾಗಿದ್ದಾರೆ.
ಮೃತರನ್ನು 28 ವರ್ಷದ ಶ್ವೇತಾ, 20 ವರ್ಷದ ಚೈತ್ರ, 28 ವರ್ಷದ ಪ್ರಿಯಾಂಕಾ, 50 ವರ್ಷದ ವಿಜಯಮ್ಮ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿ ಐವರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ
ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


