ರಸ್ತೆ ಬದಿಯಲ್ಲಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ದುರ್ಘಟನೆ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದಲ್ಲಿ ನಡೆದಿದೆ.
ತುಮಕೂರು ಮೂಲದ ಪ್ರವಾಸಿಗರಿದ್ದ ಕಾರು ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿದೆ.
ಕಾರಿನಲ್ಲಿದ್ದ ಗುರುಕಿರಣ್(28),ಮೋಹನ್ (30) ಜ್ಞಾನೇಶ್(28) ಸ್ಥಳದಲ್ಲೇ ಸಾವಪ್ಪಿದ್ದಾರೆ. ಪ್ರೇಮ್ ಕುಮಾರ್, ಹೃತಿಕ್ ಸ್ಥಿತಿ ಗಂಭೀರವಾಗಿದ್ದು, ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾರಿನಲ್ಲಿದ್ದವರು ತುಮಕೂರಿನಿಂದ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟ್ಟಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ಕೊಟ್ಟಿಗೆಹಾರ ಪೆಟ್ರೋಲ್ ಬಂಕ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದ್ದಾರೆ.
ಅಪಘಾತದ ಶಬ್ಧ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದು ಕಾರಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದು, ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಬಗ್ಗೆ ವಿವರಿಸಿರುವ ಬಣಕಲ್ ಅಂಬುಲೆನ್ಸ್ ಚಾಲಕ ಆರೀಫ್ ; ಘಟನೆ ರಾತ್ರಿ ಸುಮಾರು 1-30 ರ ಸಮಯದಲ್ಲಿ ಸಂಭವಿಸಿದ್ದು, ಕಾರು ರಸ್ತೆಬದಿಯ ಕಟ್ಟೆಗೆ ಹೊಡೆದು ನಂತರ ಲಾರಿಗೆ ಡಿಕ್ಕಿಯಾಗಿದೆ. ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಗೊಂಡ ಇಬ್ಬರನ್ನು ಹಾಸನ ಆಸ್ಪತ್ರೆಗೆ ರವಾನಿಸಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಎಲ್ಲರೂ ಒಂದೇ ಊರಿನವರಾಗಿದ್ದು, ಒಟ್ಟಾಗಿ ಧರ್ಮಸ್ಥಳ ಪ್ರವಾಸಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಬಣಕಲ್ ಪೊಲೀಸರು ಪ್ರಕರಣ ದಾಲಿಸಿದ್ದಾರೆ.


