leed suddi (2)

 

 

ಚಿಕ್ಕಮಗಳೂರು ಜಿಲ್ಲೆಯ 137 ಗ್ರಾಮಗಳನ್ನು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ 7ನೇ ಬಾರಿ ಪರಿಸರ ಸೂಕ್ಷ್ಮಲಯ ಎಂದು ಅಧಿಸೂಚನೆ ಹೊರಡಿಸಿದೆ. ಪಶ್ಚಿಮಘಟ್ಟ ಪ್ರದೇಶದ ಜನರ ಪ್ರಬಲ ವಿರೋಧದಿಂದಾಗಿ ರದ್ದುಪಡಿಸಲಾಗಿತ್ತು. ಹಿಂದೆ 6 ಬಾರಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿತ್ತು. ಈ ಬಾರಿ ಕೂಡ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.

ಕಸ್ತೂರಿ ರಂಗನ್ ವರದಿಯ ಪ್ರಕಾರ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಪಶ್ಚಿಮಘಟ್ಟದ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ 7ನೇ ಬಾರಿ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಬೆಟ್ಟಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದ ಬೆಟ್ಟಗೆರೆ, ತ್ರಿಪುರ, ಬಕ್ಕಿ, ಕೋಗಿಲೆ, ಹಳಿಕೆ ಗ್ರಾಮಸ್ಥರು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶದ 20668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದು ಸರಿಯಲ್ಲ. ಈಗಾಗಲೆ ವನ್ಯಮೃಗ ಮತ್ತು ಮಾನವ ಸಂಘರ್ಷಗಳು ಮಿತಿಮೀರಿದೆ. ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದರೆ ಪಶ್ಚಿಮ ಘಟ್ಟದ ರೈತರ ಬದುಕನ್ನು ಕಸಿದುಕೊಂಡಂತಾಗುತ್ತದೆ. ಡಾ.ಕೆ.ಕಸ್ತೂರಿ ರಂಗನ್ ಅವರು ವರದಿ ತಯಾರಿಸುವ ವೇಳೆ ಸ್ಯಾಟಲೈಟ್ ಸರ್ವೆ ನಡೆಸಿ ಬೇಕಾಬಿಟ್ಟಿಯಾಗಿ ವರದಿ ತಯಾರಿಸಿದ್ದಾರೆ. ಕೇಂದ್ರ ಸರ್ಕಾರ ಸ್ಯಾಟಲೈಟ್ ಸರ್ವೆಯನ್ನು ಕೈಬಿಟ್ಟು ಭೌತಿಕ ಸರ್ವೆ ನಡೆಸಬೇಕು. ಈಗ ಹೊರಡಿಸಿರುವ ಕರಡು ಅಧಿಸೂಚನೆಯನ್ನು ರದ್ದುಪಡಿಸಬೇಕು. ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು ಸದನದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಬೇಕು. ಪರಿಸರ ಸೂಕ್ಷ್ಮ ವಲಯ ಎಂದು ಈಗ ಹೊರಡಿಸಿದಿರುವ ಅಧಿಸೂಚನೆಗೆ ಇನ್ನು 45 ದಿನದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ. ರಾಜ್ಯದ ಜನ ಪ್ರಬಲ ಆಕ್ಷೇಪ ಸಲ್ಲಿಸುವ ಮೂಲಕ ಕರಡು ಅಧಿಸೂಚನೆಯನ್ನು ತಿರಸ್ಕರಿಸಬೇಕು. ಇದಕ್ಕಾಗಿ ದೊಡ್ಡ ಮಟ್ಟದ ಹೋರಾಟ ನಡೆಯಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಜೀವ ವೈವಿಧ್ಯದ ಜೊತೆಗೆ ಗ್ರಾಮೀಣರ ಬದುಕು ಹಿಂದಿನಿಂದಲೂ ಬೆಳೆದುಬಂದಿದೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಪಶ್ಚಿಮಘಟ್ಟದ ಕಾಫಿ ಬೆಳೆಗಾರರು 60 ಬಿಲಿಯನ್ ಮರಗಳನ್ನು ಬೆಳೆದಿದ್ದಾರೆ. 2 ಲಕ್ಷ ಕೆರೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಜೀವ ಜಂತುಗಳು, ಜಲಚರಗಳು ಉಳಿಯುವಂತಾಗಿದೆ. ಕಾಡಾನೆ ಇತರೆ ಕಾಡುಪ್ರಾಣಿಗಳು, ಪಕ್ಷಿಗಳ ಸಂಕುಲವನ್ನು ಬೆಳೆಗಾರರು ರಕ್ಷಿಸಿದ್ದಾರೆ. ಕಾಫಿ ಬೆಳಗಾರರಿಗೆ ಬೇರೆ ಉದ್ಯೋಗವಿಲ್ಲ. ಭೂಮಿಯೊಂದಿಗೆ ಬೆಳೆಗಾರರಿಗೆ ಬಾಂಧವ್ಯವಿದೆ. ಅದನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುವ ಪ್ರಯತ್ನಕ್ಕಿಳಿಯಬಾರದು. ಪಶ್ಚಿಮಘಟ್ಟ ಪ್ರದೇಶದ ಕಾಫಿ ತೋಟಗಳಲ್ಲಿ ಮರ ಅಥವಾ ರೆಂಬೆಗಳನ್ನು ಕತ್ತರಿಸಿದರೂ ಸ್ಯಾಟಲೈಟ್ ಕ್ಯಾಮರಾದಲ್ಲಿ ಸರ್ಕಾರ ಗಮನಿಸುತ್ತದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಬೇಕಾಗಿದೆ. ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಿ.ಮೀ ಬಫರ್ ಝೋನ್ ಎಂದು ಘೋಷಿಸಲಾಗಿದೆ. ಸ್ಯಾಟಲೈಟ್ ಸರ್ವೆಯಾದ್ದರಿಂದ ಇದು ಮಾಕೋನಹಳ್ಳಿ ಗ್ರಾಮದವರೆಗೆ 15 ಕಿ.ಮೀ ಬಫರ್ ಝೋನ್ ವ್ಯಾಪ್ತಿಗೊಳಪಡಲಿದೆ. ಭೌತಿಕ ಸರ್ವೆಯಾದರೆ ನಿರ್ದಿಷ್ಟ ಪ್ರದೇಶ ಮಾತ್ರ ಬಫರ್ ಝೋನ್ ವ್ಯಾಪ್ತಿಗೆ ಸೀಮಿತವಾಗಲಿದೆ. ಸ್ಯಾಟಲೈಟ್ ಸರ್ವೆಯಿಂದ ಪಶ್ಚಿಮಘಟ್ಟದ ಜನ ನೆಮ್ಮದಿಯನ್ನು ಕಳೆದುಕೊಂಡು ಗೊಂದಲದಲ್ಲಿದ್ದಾರೆ. ಜನರ ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭಾರತದಲ್ಲಿ ಬೆಳೆಯುವ ಕಾಫಿಯನ್ನು 25 ದೇಶಕ್ಕೆ ರಫ್ತು ಮಾಡಲಾಗುತ್ತದೆ. ಜಿಪಿಎಸ್ ಮೂಲಕ ಭಾರತದ ಕಾಫಿಯ ಪರಿಚಯವನ್ನು ಇತರೆ ದೇಶದವರು ಮಾಡಿಕೊಂಡಿದ್ದಾರೆ. ಕಾಫಿಯಿಂದ ಭಾರತದ ಘನತೆ ಹೆಚ್ಚಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕಾಫಿ ಬೆಳೆಯುವ ಪಶ್ಚಿಮ ಘಟ್ಟದಲ್ಲಿ 50 ಸಾವಿರ ಕಾಡುಕೋಣಗಳು, 300 ಕಾಡಾನೆಗಳಿವೆ. ಹುಲಿ, ಚಿರತೆ, ಮಂಗಗಳು ಸೇರಿದಂತೆ ಪ್ರಾಣಿಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಬೇಕು. ಇನ್ನಷ್ಟು ಸಂತಾನ ವೃದ್ಧಿಗೊಂಡರೆ ರೈತರು ಜಮೀನು ಪಾಳು ಬಿಡಬೇಕಾಗುತ್ತದೆ. ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ಎಂದು ಕರಡು ಅಧಿಸೂಚನೆ ಹೊರಡಿಸಿರುವ ಪ್ರದೇಶದಲ್ಲಿ 36 ಮಂದಿ ಶಾಸಕರು, 11ಮಂದಿ ಸಂಸದರಿದ್ದಾರೆ. ಅವರು ಸದನದಲ್ಲಿ ಚರ್ಚಿಸಿದರೆ ಕಾಡುಪ್ರಾಣಿಗಳನ್ನು ಸ್ಥಳಾಂತರಿಸಬಹುದು. ಸರ್ಕಾರ ಕಾಡುಪ್ರಾಣಿಗಳನ್ನು ಸ್ಥಳಾಂತರಿಸಬೇಕು. ಅದು ಸಾಧ್ಯವಾಗದಿದ್ದರೆ ಮಲೆನಾಡು ಭಾಗದ ಜನರನ್ನಾದರೂ ಸ್ಥಳಾಂತರಿಸಿ ಪುಣ್ಯ ಕಟ್ಟಿಕೊಳ್ಳಲಿ. 20 ವರ್ಷದಿಂದ ಜಿಲ್ಲೆಯಲ್ಲಿ ಸಚಿವರಿಲ್ಲದೆ ಬರಡಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಚಿವರಿದಿದ್ದರೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು ಕಾಯ್ದೆಯಾಗಿ ಹೊರಬರುತ್ತಿತ್ತು. ಇದರಿಂದ ಬಹುತೇಕ ಸಮಸ್ಯೆಗೆ ಮುಕ್ತಿ ದೊರೆಯುತ್ತಿತ್ತು. ಈಗ ಎಲ್ಲಾ ಸಮಸ್ಯೆಗಳು ಜೀವಂತವಾಗಿ ಉಳಿದಿದೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರೆ ಇಲ್ಲ. ಕಸ್ತೂರಿರಂಗನ್ ವರದಿಯಿಂದ ಜನ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪವಲಯ ಅರಣ್ಯಾಧಿಕಾರಿ ಬಸವರಾಜ್ ಮಾತನಾಡಿ, ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾಗಿರು ವುದು ಅರಣ್ಯ ಇಲಾಖೆಯಿಂದಲ್ಲ. ಕೇಂದ್ರದ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯಿಂದ. ಈ ಅಧಿಸೂಚನೆ ಮೂಡಿಗೆರೆ ಮತ್ತು ಕಳಸ ತಾಲೂಕಿನ 26 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಬಫರ್ ಝೋನ್ ಅಧಿಸೂಚನೆ ವ್ಯಾಪ್ತಿಯಲ್ಲಿ 20 ಚದರ ಅಡಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಹೊಸದಾಗಿ ಬಡಾವಣೆ ನಿರ್ಮಾಣ, ಗಣಿಗಾರಿಕೆ ಸೇರಿದಂತೆ ರಾಸಾಯನಿಕ ಬಳಕೆಗೆ ಅವಕಾಶವಿಲ್ಲ. ಕರಡು ಅಧಿಸೂಚನೆಯನ್ನು ವಿರೋಧಿಸುವವರಿಗೆ 45 ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ಉಪವಲಯ ಅರಣ್ಯಾಧಿಕಾರಿ ರಂಜಿತ್ ಮಾತನಾಡಿ, ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 14 ಸಾವಿರ ಎಕರೆ, ಸಾರಗೋಡು ವ್ಯಾಪ್ತಿಯಲ್ಲಿ 10 ಸಾವಿರ ಎಕರೆ ಮೀಸಲು ಅರಣ್ಯವಿದೆ. ಸಾರಗೋಡು ಮೀಸಲು ಅರಣ್ಯದಲ್ಲಿ 5 ಹುಲಿ, 300 ಕಾಡುಕೋಣವಿದೆ. ಕಾಡಾನೆಗಳು ಕೂಡ ಹೆಚ್ಚಾಗಿದೆ. ವನ್ಯಮೃಗಗಳು ಪರಿಸರಕ್ಕೆ ಸಮತೋಲನವಾಗಿ ಜೀವಿಸುತ್ತಿದೆ. ಕಾಡಾನೆ, ಕಾಡುಕೋಣ ಇತರೆ ಕಾಡುಪ್ರಾಣಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಬೇಕೆಂದು ಸಾರ್ವಜನಿಕರು ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಸರ್ಕಾರದಿಂದ ಆದೇಶ ಬಂದ ಕೂಡಲೆ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬೆಟ್ಟಗೆರೆ ಮತ್ತು ತ್ರಿಪುರ ಗ್ರಾಪಂ ಆಡಳಿತಾಧಿಕಾರಿ ಸಾಧಿಕಾ ಬಾನು, ಪಿಡಿಒಗಳಾದ ಪುನರ್ವ, ಎಚ್.ಎನ್.ಮಹೇಶ್, ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್, ಮಾಜಿ ಜಿಪಂ ಸದಸ್ಯರಾದ ಬಿ.ಆರ್.ಸುಬ್ಬಯ್ಯ, ನಿಖಿಲ್ ಚಕ್ರವರ್ತಿ, ಗ್ರಾಪಂ ಅಧ್ಯಕ್ಷರಾದ ಬಿ.ಆರ್.ಯತೀಶ್, ದಿನೇಶ್, ಗ್ರಾಮಸ್ಥರಾದ ಬಿ.ಎಂ.ಶಂಕರ್, ಉಪೇಂದ್ರ ಗೌಡ, ಮನೋಜ್, ವಸಂತ, ಅಶ್ವಥ್, ಪುನೀತ್ ಇತರರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ