ನಿರಂತರ ಕಾಡಾನೆ ದಾಳಿಗೊಳಗಾಗಿರುವ ಮೂಡಿಗೆರೆ ತಾಲ್ಲೂಕಿನ ಮಣ್ಣಿಕೆರೆ, ಜನ್ನಾಪುರ, ನಿಡಗೋಡು ಭಾಗಗಳಿಗೆ ಶುಕ್ರವಾರ ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‍ಶೆಟ್ಟಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿ ಸರಕಾರ ಸೂಕ್ತ ಪರಿಹಾರ ಮತ್ತು ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‍ಶೆಟ್ಟಿ ಮಾತನಾಡಿ, ತಾಲೂಕಿನ ಅನೇಕ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ಸಂಚಾರ ನಡೆಸುತ್ತಿವೆ. ಎತ್ತಿನಹೊಳೆ ಡ್ಯಾಮ್ ನಂತರ ದಾರಿ ತಪ್ಪಿರುವ ಕಾಡಾನೆಗಳು ಚೀಕನಹಳ್ಳಿ, ಅರೇಹಳ್ಳಿ ಭಾಗದಲ್ಲಿ ಮೂಡಿಗೆರೆ ತಾಲೂಕಿನಾಧ್ಯಂತ ಸಂಚರಿಸುತ್ತಿದ್ದು, ಕಾಫಿ ತೋಟಗಳನ್ನೇ ಆವಾಸ ಸ್ಥಾನವನ್ನಾಗಿಸಿಕೊಂಡಿವೆ. ಇದರಿಂದ ರೈತರು ಜೀವದ ಹಂಗು ತೊರೆದು ಬದುಕುವ ಹಂತಕ್ಕೆ ಹೋಗಿದ್ದಾರೆ. ಇದ್ದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಯಿಂದ ಹೊರ ಹೋಗಲು, ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹೆದರುತ್ತಿದ್ದಾರೆ. ಈ ಸಮಸ್ಯೆಗೆ ರಾಜ್ಯ ಸರಕಾರ ಬಗೆಹರಿಸುತ್ತಿಲ್ಲ ಎಂದು ದೂರಿದರು.
ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಕಾಡಾನೆ ಟಾಸ್ಕ್‍ಪೋರ್ಸ್ ರಚನೆ ಮಾಡಿತ್ತು. ಅವುಗಳ ತಂಡ ಕಡಿಮೆ ಮಾಡಿ ನಿಷ್ಕ್ರಿಯೆಗೊಳಿಸುವ ಹಂತಕ್ಕೆ ತರಲಾಗಿದೆ. ರೈತರಿಗೆ ಪಟಾಕಿ ನೀಡುತ್ತಿಲ್ಲ. ಬೆಳೆನಷ್ಟ ಪರಿಹಾರ ನೀಡುತ್ತಿಲ್ಲ. ಅತೀ ಹೆಚ್ಚು ನಷ್ಟ ಉಂಟಾದಾಗ ಕೇವಲ ಶೇ.25 ರಷ್ಟು ಮಾತ್ರ ಪರಿಹಾರ ನೀಡಲಾಗುತ್ತಿದೆ. ಕಾಡಾನೆ ನಿಯಂತ್ರಣಕ್ಕೆ ಸೋಲಾರ್ ವಿದ್ಯುತ್ ತಂತಿ ಹಾಗೂ ಟ್ರಂಚ್‍ಗಳನ್ನು ನಿರ್ಮಿಸಬೇಕಾಗಿದೆ. ಆದರೆ ಸರಕಾರದ ಶಾಸಕರು ಅಧಿಕಾರಕ್ಕಾಗಿ ಸ್ವಪಕ್ಷದಲ್ಲಿಯೇ ಕಚ್ಚಾಡುತ್ತಿದ್ದು, ಜನರ ಗೋಳು ಕೇಳುತ್ತಿಲ್ಲ. ಈ ಬಗ್ಗೆ ಬಿಜೆಪಿ ಪಕ್ಷದಿಂದ ಜಿಲ್ಲೆಯಲ್ಲಿ ರೈತರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರು, ಅನೇಕ ವರ್ಷದಿಂದ ಕಾಡಾನೆ ಸಮಸ್ಯೆಯಿಂದ ಬಳಲುತ್ತಿದ್ದೇವೆ. ತೆಂಗು, ಬಾಳೆ, ಅಡಕೆ, ಕಾಫಿ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಹಲವಾರು ವರ್ಷದಿಂದ ಕಷ್ಟಪಟ್ಟು ಬೆಳೆದಿದ್ದು, ನಮ್ಮ ಜೀವನದ ಆದಾಯ ಮೂಲವೇ ನಾಶವಾಗುತ್ತಿದೆ. ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅರ್ಜಿ ಹಾಕಿ ವರ್ಷಗಳೇ ಕಳಿದಿವೆ. ಸೂಕ್ತ ಪರಿಹಾರ ಬರುತ್ತಿಲ್ಲ. ಕೇಳಿದರೆ ಬಜೆಟ್ ಕೊರತೆ, ಬಂದ ಹಣವನ್ನು ಕಂತುಗಳ ರೂಪದಲ್ಲಿ ನೀಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಈ ವೇಳೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ಕವಿತಾ ಶೇಖರ್, ರಘು ಜನ್ನಾಪುರ, ಪ್ರಕೋಷ್ಟ ಅಧ್ಯಕ್ಷ ಪಂಚಾಕ್ಷರಿ, ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ಪ್ರಶಾಂತ್ ಬಿಳಗುಳ, ನಯನ ತಳವಾರ, ರಮೇಶ್ ದೇವವೃಂದ, ಸುನೀಲ್ ಮಣ್ಣಿಕೆರೆ, ಅವಿನಾಶ್ ಮತ್ತಿತರರಿದ್ದರು.


